ನವದೆಹಲಿ, ಏ 06 (DaijiworldNews/AA): ಇನ್ನೇನು ಕೆಲವೇ ವಾರಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಈ ಲೋಕಸಭೆ ಚುನಾವಣೆ ಮೇಲೆ ಚೀನಾವು ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನ ಬಳಸಿಕೊಂಡು ಪ್ರಭಾವ ಬೀರುವ ಸಾದ್ಯತೆ ಇದೆ ಎಂದು ಭಾರತಕ್ಕೆ ಮೈಕ್ರೋಸಾಫ್ಟ್ ಕಂಪನಿ ಎಚ್ಚರಿಕೆ ನೀಡಿದೆ.
ಈ ಬಾರಿಯ ಲೋಕಸಭಾ ಚುನಾವಣೆಯ ಮತದಾನವು 7 ಹಂತದಲ್ಲಿ ನಡೆಯಲಿದ್ದು, ಮೊದಲ ಹಂತದ ಮತದಾನವು ಏ.26 ರಂದು ನಡೆಯಲಿದೆ. ಈ ಚುನಾವಣೆಯಲ್ಲಿ ಚೀನಾ ಎಐ ತಂತ್ರಜ್ಞಾನ ಬಳಸಿ ಚುನಾವಣೆಗಳ ಮೇಲೆ ಪ್ರಭಾವ ಬೀರಬಹುದು. ಈ ಸಂದರ್ಭ ಹ್ಯಾಕಿಂಗ್ ಪ್ರಯತ್ನಗಳನ್ನು ಕೂಡ ಚೀನಾ ಮಾಡಬಹುದು ಎಂದು ಮೈಕ್ರೋಸಾಫ್ಟ್ ಎಚ್ಚರಿಸಿದೆ.
ಇನ್ನು ಮೈಕ್ರೋಸಾಫ್ಟ್ ಪ್ರಕಾರ ಚೀನಾ ಸರ್ಕಾರದ ಸೈಬರ್ ಗುಂಪುಗಳು ಈ ವರ್ಷ ನಡೆಯಲಿರುವ ಪ್ರಮುಖ ಚುನಾವಣೆಗಳನ್ನು ಟಾರ್ಗೆಟ್ ಮಾಡುತ್ತದೆ. ಚೀನಾದೊಂದಿಗೆ ಉತ್ತರ ಕೊರಿಯಾ ಕೂಡ ಇದರಲ್ಲಿ ಪಾತ್ರ ವಹಿಸಬಹುದು. ಭಾರತ ಸೇರಿ ಈ ವರ್ಷ ನಡೆಯಲಿರುವ ದಕ್ಷಿಣ ಕೊರಿಯಾ ಮತ್ತು ಅಮೆರಿಕ ಚುನಾವಣೆಗಳ ಮೇಲೂ ಚೀನಾ ಎಐ ಬಳಸಿ ಹಸ್ತಕ್ಷೇಪ ಮಾಡುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.