ದೆಹಲಿ, ಏ 06 (DaijiworldNews/AA): ರಾಜ್ಯ ಗೃಹಸಚಿವ ಡಾ. ಜಿ ಪರಮೇಶ್ವರ್ ಅವರು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಂತಹ ಕಾಂಗ್ರೆಸ್ ನಾಯಕರ ನಿರ್ದೇಶನದಂತೆ ಭಾರತ ವಿರೋಧಿ, ದುಃಖಕರ ಮತ್ತು ಆತಂಕಕಾರಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು ವಾಗ್ದಾಳಿ ನಡೆಸಿದ್ದಾರೆ.
ಸಚಿವ ಡಾ. ಜಿ ಪರಮೇಶ್ವರ್ ಅವರು ಪುಲ್ವಾಮಾ ದಾಳಿಯ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪರಮೇಶ್ವರ್ ಅವರು ಕೇಂದ್ರ ಸರ್ಕಾರದ ನಿರ್ದೇಶನದಲ್ಲಿ ಪುಲ್ವಾಮಾ ದಾಳಿ ನಡೆದಿದೆ ಎಂದು ಹೇಳಿದ್ದಾರೆ. ಇದನ್ನು ನಂಬಲು ಸಾಧ್ಯವಿಲ್ಲ. ಪರಮೇಶ್ವರ್ ಅವರು ನೀಡಿರುವ ಈ ಹೇಳಿಕೆಯು ಕಾಂಗ್ರೆಸ್ನ ಗುಣವನ್ನು ತೋರಿಸುತ್ತದೆ. ಕಾಂಗ್ರೆಸ್ ಇಂದು ಭಾರತ ವಿರೋಧಿ ಪಕ್ಷವಾಗಿದೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ವರದಿ ಸಲ್ಲಿಸುವ ಗುಪ್ತಚಾರ ಇಲಾಖೆ, ಅವರ ಸೂಚನೆಯ ಮೇರೆಗೆ ಪಾಕಿಸ್ತಾನದಲ್ಲಿ ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳನ್ನು ಕೊಲ್ಲುತ್ತಿದೆ ಎಂದು ಬ್ರಿಟಿಷ್ ಪತ್ರಿಕೆಯೊಂದು ಇತ್ತೀಚೆಗೆ ವರದಿ ಮಾಡಿತ್ತು. ಈ ವರದಿಯ ಬಳಿಕ ಸಚಿವ ಡಾ. ಜಿ ಪರಮೇಶ್ವರ್ ಅವರು ಕೇಂದ್ರ ಸರ್ಕಾರ ನಿರ್ದೇಶನದಂತೆ ಪುಲ್ವಾಮಾ ದಾಳಿ ನಡೆದಿರಬಹುದೆಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.