ನವದೆಹಲಿ, ಏ 07 (DaijiworldNews/AA): ವಿಪ್ರೋ ಕಂಪೆನಿಯ ಸಿಇಒ, ಎಂ.ಡಿ. ಥಿಯೆರ್ರಿ ಡೆಲಾಪೋರ್ಟೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಶ್ರೀನಿವಾಸ್ ಪಲ್ಲಿಯಾ ಅವರು ಆಯ್ಕೆಯಾಗಿದ್ದು, ಇಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಶ್ರೀನಿವಾಸ್ ಪಲ್ಲಿಯಾ ಅವರನ್ನು ಶ್ರೀನಿ ಪಲ್ಲಿಯಾ ಎಂದು ಕೂಡ ಕರೆಯಲಾಗುತ್ತದೆ. ಕಂಪನಿಯ ಅಮೇರಿಕಾಸ್ 1 ಪ್ರದೇಶದ ಸಿಇಒ ಆಗಿರುವ ಅವರು ಇಂದಿನಿಂದ ನೂತನ ಸಿಇಒ, ಎಂ.ಡಿ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಡೆಲಾಪೋರ್ಟೆ ಅವರು 2020ರ ಜುಲೈಯಲ್ಲಿ ವಿಪ್ರೋದ ಸಿಇಒ ಮತ್ತು ಎಂಡಿ ಆಗಿ ನೇಮಕಗೊಂಡಿದ್ದರು. ಈ ಕುರಿತು ಮಾಹಿತಿ ನೀಡಿರುವ ವಿಪ್ರೋ ಅಧ್ಯಕ್ಷ ರಿಷದ್ ಪ್ರೇಮ್ ಜಿ ಅವರು "ಥಿಯೆರ್ರಿ ಡೆಲಾಪೋರ್ಟೆ ಅವರು ರಾಜೀನಾಮೆ ನೀಡಿದ್ದು, ಅವರನ್ನು 2024ರ ಮೇ 31ರಂದು ಅವರನ್ನು ಕಂಪೆನಿಯ ಉದ್ಯೋಗದಿಂದ ಮುಕ್ತಗೊಳಿಸಲಾಗುವುದು" ಎಂದು ಹೇಳಿದ್ದಾರೆ.
ಇನ್ನು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಡೆಲಾಪೋರ್ಟೆ ಅವರು ವಾರ್ಷಿಕ 82 ಕೋಟಿ ರೂ. ಗಿಂತ ಅಧಿಕ ವೇತನ ಪ್ಯಾಕೇಜ್ ಹೊಂದಿದ್ದರು. ಈ ಮೂಲಕ ಡೆಲಾಪೋರ್ಟೆ ಅವರು ಭಾರತೀಯ ಐಟಿ ವಲಯದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಸಿಇಒ ಆಗಿದ್ದರು.