ನವದೆಹಲಿ, ಏ 08 (DaijiworldNews/AK): ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಅಡಿಯಲ್ಲಿ ರಾಜ್ಯಕ್ಕೆ 18,171 ಕೋಟಿ ರೂ. ಬರ ಪರಿಹಾರ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಕರ್ನಾಟಕ ಸರ್ಕಾರ ಅರ್ಜಿ ಸಲ್ಲಿಸಿದ್ದು, ಇಂದು (ಸೋಮವಾರ) ವಿಚಾರಣೆ ನಡೆಯಲಿದೆ.
ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ನೇತೃತ್ವದ ಪೀಠವು ಅರ್ಜಿ ವಿಚಾರಣೆ ನಡೆಸಲಿದೆ. ರಾಜ್ಯವು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ವರದಿ ಪ್ರಕಾರ, 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದೆ.
ಬರ ಪರಿಣಾಮದಿಂದಾಗಿ 48 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. 2023ರ ಅಕ್ಟೋಬರ್ನಲ್ಲಿ ನಷ್ಟ ಪರಿಶೀಲಿಸಲು ಅಂತರ-ಸಚಿವಾಲಯದ ಕೇಂದ್ರ ತಂಡ ಸಹ ರಾಜ್ಯಕ್ಕೆ ಭೇಟಿ ನೀಡಿತ್ತು. ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ (ಜೂನ್) ಮಳೆಯ ಕೊರತೆ ಶೇ.56 ರಷ್ಟಿತ್ತು. ಜೊತೆಗೆ ಆಗಸ್ಟ್ ತಿಂಗಳಲ್ಲಿ ಶೇ.73 ಮಳೆ ಕೊರತೆ ಉಂಟಾಗಿದೆ.
ಅಷ್ಟೇ ಅಲ್ಲದೇ ಕಳೆದ ವರ್ಷದ ಮಾನ್ಸೂನ್ ಸಮಯದಲ್ಲಿಯೂ ರಾಜ್ಯದಲ್ಲಿ ಸಾಮಾನ್ಯಕ್ಕಿಂತ 18% ಕಡಿಮೆ ಮಳೆಯಾಗಿದೆ. 2015ರ ಬಳಿಕ ಈ ಪ್ರಮಾಣದಲ್ಲಿ ಕಡಿಮೆ ಮಳೆ ಬಿದ್ದಿದೆ. ಮುಂಗಾರು ನಂತರದ ಅವಧಿಯು ಸಹ ರಾಜ್ಯಕ್ಕೆ ಹೆಚ್ಚಿನ ಮಳೆಯನ್ನು ತರಲಿಲ್ಲ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.