ಬೆಂಗಳೂರು, ಏ 08 (DaijiworldNews/AA): ಕಾರಿನ ಡೋರ್ ತೆರೆಯುವಾಗ ನಮ್ಮ ಕಾರ್ಯಕರ್ತ ಹಿಂದಿನಿಂದ ಬಂದು ಗುದ್ದಿದ್ದಾನೆ. ಈ ಸಂದರ್ಭ ಬೈಕ್ ನಿಂದ ಬಿದ್ದ ಪ್ರಕಾಶ್ ಮೇಲೆ ಬಸ್ ಹರಿದಿದೆ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.
ಘಟನೆಯ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ನಮ್ಮ ಪಕ್ಷದ ರ್ಯಾಲಿ ಇತ್ತು. ಎಲ್ಲರೂ ರ್ಯಾಲಿ ಮುಗಿಸಿಕೊಂಡು ಬರುವಾಗ ಕೆಆರ್ ಪುರಂ ಸರ್ಕಲ್ ಬಳಿ ಕಾರು ನಿಲ್ಲಿಸಿದ್ವಿ. ನಮ್ಮ ಕಾರ್ಯಕರ್ತ ಪ್ರಕಾಶ್ ಹಿಂಬದಿಯಿಂದ ಬಂದು ಗುದ್ದಿಕೊಂಡಿದ್ದಾನೆ. ಕಾರು ನಮ್ಮದೇ. ಡೋರ್ ತೆಗೆದಾಗ ಬಿದ್ದಿದ್ದಾರೆ. ಬಳಿಕ ಅವರ ಮೇಲೆ ಬಸ್ ಹರಿದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.
ನಮ್ಮ ಕಾರ್ಯಕರ್ತ ಪ್ರಕಾಶ್ ಸಾವನ್ನಪ್ಪಿರುವುದು ನಿಜಕ್ಕೂ ದುರ್ದೈವ. ಅವರು ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಾವು ಅವರ ಕುಟುಂಬಕ್ಕೆ ಏನು ಸಹಾಯ ಮಾಡಬೇಕೋ ಮಾಡ್ತೀವಿ. ಅವರ ಕುಟುಂಬದೊಂದಿಗೆ ನಾವೀದ್ದೇವೆ. ಪ್ರಕಾಶ್ ಅವರ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ನಮ್ಮ ಪಕ್ಷ ನಿರ್ಧಾರ ಮಾಡುತ್ತದೆ ಎಂದರು.
ಇಂದು ಶೋಭಾ ಕರಂದ್ಲಾಜೆ ಅವರ ಕಾರಿನ ಡೋರ್ ತೆರೆಯುತ್ತಿದ್ದಾಗ ಏಕಾಏಕಿ ಬೈಕೊಮದು ಹಿಂಬದಿಯಿಂದ ಬಂದು ಢಿಕ್ಕಿ ಹೊಡೆದಿದ್ದು, ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.