ಬೆಂಗಳೂರು, ಏ 08 (DaijiworldNews/AK): ಇತ್ತಿಚೇಗೆ ನಿಧನರಾದ ನಿವೃತ್ತ ಐಎಎಸ್ ಅಧಿಕಾರಿ, ನಟ ಮತ್ತು ರಾಜಕಾರಣಿ ಕೆ ಶಿವರಾಂ ಅವರ ಪತ್ನಿ ವಾಣಿ ಶಿವರಾಂ ಅವರು ಇಂದು ಕಾಂಗ್ರೆಸ್ ಪಕ್ಷ ಸೇರಿದರು.
ವಾಣಿಯವರನ್ನು ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಪಕ್ಷದ ಶಾಲು ಹೊದಿಸಿ ಮತ್ತು ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ವಾಣಿಯವರೊಂದಿಗೆ ಬೇರೆ ಬೇರೆ ಪಕ್ಷಗಳ ಇನ್ನೂ ಹಲವಾರು ಮುಖಂಡರು ಕಾಂಗ್ರೆಸ್ ಪಕ್ಷ ಸೇರಿದರು. ಬಹಳ ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಶಿವರಾಂ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದರು. ಛಲವಾದಿ ಸಮುದಾಯದ ಪ್ರಬಲ ನಾಯಕರಾಗಿದ್ದ ತಮ್ಮ ಪತಿಯನ್ನು ಬಿಜೆಪಿ ಬಳಸಿಕೊಂಡಿತೆ ವಿನಃ ಬೆಳಸುವ ಕೆಲಸ ಮಾಡದೆ ಮೋಸ ಮಾಡಿತು ಎಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಹೇಳಿದರು.
ಪತಿಯ ಮರಣದ ನಂತರ ಟಿಕೆಟ್ ತಮಗೆ ಸಿಗಬಹುದೆಂಬ ನಿರೀಕ್ಷೆ ಪ್ರಾಯಶಃ ಅವರಲ್ಲಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದ ತೇಜಸ್ವಿನಿ ಗೌಡ ಸಹ ಇದ್ದರು.