ನವದೆಹಲಿ,ಏ 09 (DaijiworldNews/AK): ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಇಡಿ ಬಂಧಿಸಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.
ಮಂಗಳವಾರ ಹೈಕೋರ್ಟ್ ನಲ್ಲಿ ತಮ್ಮ ಅರ್ಜಿ ವಜಾ ಆದ ಬೆನ್ನಲ್ಲೇ ಸುಪ್ರೀಂಕೋರ್ಟ್ ನಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಲಾಗಿದೆ.ಅರ್ಜಿ ಸಲ್ಲಿಕೆ ಬೆನ್ನಲ್ಲೇ ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಕೇಜ್ರಿವಾಲ್ ಅವರ ಮನವಿಯನ್ನು ತುರ್ತು ವಿಚಾರಣೆ ನಡೆಸಬೇಕು ಎಂದು ಕೋರಿ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠಕ್ಕೆ ಮನವಿ ಮಾಡಿದರು.
ಸಿಜೆಐ ಮಾಹಿತಿಯನ್ನು ಇಮೇಲ್ ಕಳುಹಿಸಿ ಪರಿಶೀಲಿಸಲಾಗುವುದು ಎಂದು ಸೂಚಿಸಿದರು.ಹಗರಣದಲ್ಲಿ ಕೇಜ್ರಿವಾಲ್ ಶಾಮೀಲಾಗಿರುವುದನ್ನು ಸಾಬೀತುಪಡಿಸಲು ಪುರಾವೆಗಳಿವೆ ಎಂದು ಇಡಿ ಹೇಳಿದೆ. ಹೀಗಾಗಿ ಬಂಧನ ಕಾನೂನು ಬಾಹಿರವಾಗಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತ್ತು.