ಬೆಂಗಳೂರು, ಏ 10 (DaijiworldNews/AK): ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಫೋಟೋ ಬಳಕೆಗೆ ಬಗ್ಗೆ ಗುದ್ದಾಟ ನಡೆಯುತ್ತಿದೆ .
ಬಿಜೆಪಿ ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಮುಂದಾಗಿದ್ದಾರೆ. ಅವರ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಬಳಕೆ ಮಾಡುತ್ತಿದ್ದಾರೆ. ಇದು ರಾಜ್ಯ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದೀಗ ಈಶ್ವರಪ್ಪ ಅವರು ಚುನಾವಣಾ ನರೇಂದ್ರ ಮೋದಿ ಫೋಟೋ ಮತ್ತು ಹೆಸರು ಬಳಕೆ ಮಾಡದಂತೆ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಮತ್ತು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ದೂರು ಸಲ್ಲಿಕೆ ಮಾಡಲಾಗಿದೆ.
ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿ ಈಶ್ವರಪ್ಪ ಅವರು ಮೋದಿ ಫೋಟೋ ಬಳಸಿದ್ದಕ್ಕೆ ದೂರು ನೀಡಿದ ಬಳಿಕ ಛಲವಾದಿ ನಾರಾಯಣಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಈಶ್ವರಪ್ಪ ಮೋದಿ ಫೋಟೋ ಪ್ರಚಾರಕ್ಕೆ ಬಳಸುತ್ತಿದ್ದಾರೆ. ಮೋದಿ ಭಾವಚಿತ್ರವನ್ನ ಬಳಸದಂತೆ ದೂರು ನೀಡಿದ್ದೇವೆ. ಈಶ್ವರಪ್ಪ ಪಕ್ಷದ ಅಭ್ಯರ್ಥಿ ಅಲ್ಲದ ಕಾರಣ ಪಕ್ಷದ ಹೆಸರು ಭಾವಚಿತ್ರ ಬಳಸುವ ಅಧಿಕಾರ ಅವರಿಗೆ ಇರುವುದಿಲ್ಲ. ಈಶ್ವರಪ್ಪ ಹೀಗೆ ಮುಂದುವರೆದರೆ ಕಾನೂನು ಕ್ರಮ ಆಗುತ್ತೆ ಎಂದು ಎಚ್ಚರಿಕೆ ನೀಡಿದರು.