ಬೆಂಗಳೂರು, ಏ 10(DaijiworldNews/AA): ಮಾನವ ಜೀವಕ್ಕೆ ಅಪಾಯಕಾರಿಯಾಗಿರುವ 23ಕ್ಕೂ ಅಧಿಕ ಶ್ವಾನ ತಳಿಗಳ ಮಾರಾಟ, ಸಾಕಾಣಿಕೆ ಹಾಗೂ ಅವುಗಳ ಸಂತಾನೋತ್ಪತ್ತಿಗೆ ನಿಷೇಧ ಹೇರಿ ಕೇಂದ್ರ ಸರ್ಕಾರ ಈ ಹಿಂದೆ ಆದೇಶ ಹೊರಡಿಸಿತ್ತು. ಆದರೆ ಕರ್ನಾಟಕ ಹೈಕೋರ್ಟ್ ಕೇಂದ್ರ ಸರಕಾರ ಹೊರಡಿಸಿದ ಆದೇಶವನ್ನು ಬುಧವಾರ ರದ್ದುಗೊಳಿಸಿದೆ.
ಕೆಲ ಶ್ವಾನ ತಳಿ ನಿಷೇಧಕ್ಕೆ ಸಂಬಂಧಪಟ್ಟಂತೆ ಕೇಂದ್ರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೆಲವರು ರಿಟ್ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಕೇಂದ್ರದ ನಿಷೇಧ ಆದೇಶವನ್ನು ರದ್ದುಗೊಳಿಸಿದೆ. ಕಾಯ್ದೆಯಡಿ ರಚಿಸಿದ ಸಮಿತಿಯ ಶಿಫಾರಸು ಮಾತ್ರ ಗಣನೆಗೆ ತೆಗೆದುಕೊಳ್ಳಬೇಕು. ಈ ರೀತಿಯ ಕ್ರಮಕ್ಕೂ ಮುನ್ನ ಶ್ವಾನ ತಳಿ ಸಂವರ್ಧನಾ ಸಂಘಟನೆಯ ಜೊತೆ ಸಮಾಲೋಚನೆ ನಡೆಸಬೇಕು ಎಂದು ಹೇಳಿದೆ.
ಇನ್ನು ಕೇಂದ್ರವು ಶ್ವಾನ ತಳಿ ನಿಷೇಧಿಸುವ ಆದೇಶ ನೀಡುವ ಮುನ್ನ ಕಾನೂನಿನ ಕ್ರಮ ಅನುಸರಿಸಬೇಕು. ಶ್ವಾನ ಪಾಲಕರ ಮೇಲೆಯೂ ಹೊಣೆನಿಗದಿಪಡಿಸುವ ಅಗತ್ಯವಿದೆ. ಶ್ವಾನ ಕಡಿತಕ್ಕೊಳಗಾದವರಿಗೆ ಚಿಕಿತ್ಸೆ, ನಷ್ಟ ಪರಿಹಾರದಂತಹ ಹೊಣೆ ನಿಗದಿ ಸೂಕ್ತ ಎಂದು ಪೀಠ ತಿಳಿಸಿದೆ.