ತುಮಕೂರು,ಏ. 23(DaijiworldNews/AK): ಮುಂದಿನ ಐದು ವರ್ಷದವರೆಗೆ ಯಾವ ಪಕ್ಷ ಅಧಿಕಾರದಲ್ಲಿರಬೇಕೆಂಬ ತೀರ್ಮಾನವನ್ನು ಜನತೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಅವರು ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ತುಮಕೂರಿನಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ -02 ಲೋಕಸಭೆ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿ ಮುದ್ದಹನುಮೇಗೌಡ ರವರ ಪರವಾಗಿ ಮತ ಯಾಚನೆ ಮಾಡಿ ನಂತರ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
26 ರಂದು ಜನ ಮಾಡುವ ತೀರ್ಮಾನ ದೇಶದ ಹಿತದಷ್ಟಿಯಿಂದ ಮಹತ್ವವಾದುದು. ಮುಂದಿನ ಐದು ವರ್ಷದವರೆಗೆ ಯಾವ ಪಕ್ಷ ಅಧಿಕಾರದಲ್ಲಿರಬೇಕೆಂಬ ತೀರ್ಮಾನವನ್ನು ನೀವು ಮಾಡಬೇಕು. ನಿಮ್ಮನ್ನು ಮುನ್ನಡೆಸಲು ಯಾರಿಗೆ ಯೋಗ್ಯತೆ ಇದೆ ಎಂದು ನಿಮ್ಮ ಮತದ ಮೂಲಕ ನಿರ್ಧರಿಸಬೇಕು. ಸಂಸತ್ತಿನಲ್ಲಿ ನಿಮ್ಮ ಧ್ವನಿಯನ್ನು ಸಮರ್ಥವಾಗಿ ಪ್ರತಿನಿಧಿಸುವ ಸಂಸತ್ತಿಗೆ ಹೋಗಬೇಕು. ರಾಜ್ಯದ ಹಿತ ಕಾಪಾಡುವವರು ಸಂಸತ್ತಿನಲ್ಲಿದ್ದರೆ ರಾಜ್ಯಕ್ಕೆ ಹಿತ ಎಂದರು.
ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ದೊಡ್ಡ ಅನ್ಯಾಯವಾಗಿದೆ. 15 ನೇ ಹಣಕಾಸು ಆಯೋಗ 5495 ಕೋಟಿ ಅನುದಾನ ಶಿಫಾರಸ್ಸು ಮಾಡಿದರೆ ನಿರ್ಮಲಾ ಸೀತಾರಾಮನ್ ಇದನ್ನು ಕೊಡಲು ಬರೋಲ್ಲ ಎಂದು ಕೊಡಲಿಲ್ಲ. ಪೆರಿಫೆರಲ್ ರಿಂಗ್ ರೋಡ್, ಹಾಗೂ ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ ಶಿಫಾರಸ್ಸು ಮಾಡಿದ್ದ ತಲಾ 3000 ಕೋಟಿ ರೂ ಸೇರಿದಂತೆ ಒಟ್ಟು 11495 ಕೋಟಿ ರೂಪಾಯಿ ರಾಜ್ಯಕ್ಕೆ ಬರಲಿಲ್ಲ. ಕರ್ನಾಟಕಕ್ಕೆ ಏನೂ ಕೊಡಬೇಕಿಲ್ಲ ಎಂದು ನಿರ್ಮಲಾ ಸೀತಾರಾಮನ್ ಸುಳ್ಳು ಹೇಳುತ್ತಿದ್ದಾರೆ ಎಂದರು.
ಭದ್ರಾ ಮೇಲ್ಡಂಡೆ ಯೋಜನೆಗೆ 5300 ಕೋಟಿ ರೂ. ಬಜೆಟ್ನಲ್ಲಿ ಇರುವುದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಘೋಷಿಸಿದ್ದರೂ , ಇದುವರೆಗೆ ಒಂದು ರೂಪಾಯಿಯನ್ನೂ ರಾಜ್ಯದ ಈ ಯೋಜನೆಗೆ ನೀಡಲಿಲ್ಲ. ಇದು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ತೋರಿಸುತ್ತಿರುವ ಮಲತಾಯಿ ಧೋರಣೆ. ಆದ್ದರಿಂದ ರಾಜ್ಯದ ಪರವಾಗಿ ಧ್ವನಿಎತ್ತುವ ಸಂಸದರನ್ನು ಆಯ್ಕೆ ಮಾಡಿಕಳುಹಿಸಬೇಕು ಎಂದರು.
ಸೋಮಣ್ಣನವರು ಉತ್ತಮ ಸಂಸದನಾಗಿ ಕೆಲಸಮಾಡುವುದಾಗಿ ಹೇಳುತ್ತಾರೆ. ಆದರೆ ಅವರು ವಸತಿ ಸಚಿವರಾಗಿದ್ದಾಗ ತುಮಕೂರಿಗೆ ಎಷ್ಟು ಮನೆಗಳನ್ನು ನೀಡಿದಿರಿ ಎಂದು ಇಲ್ಲಿನ ಜನರಿಗೆ ದಾಖಲಾತಿ ನೀಡಿ. ನಿಮ್ಮ ಅವಧಿಯಲ್ಲಿ ಒಂದೂ ಮನೆಯನ್ನು ಕಟ್ಟಲಿಲ್ಲವೇಕೆ ಎಂಬ ನಮ್ಮ ಪ್ರಶ್ನೆಗೆ ಅವರ ಬಳಿ ಅಂದು ಉತ್ತರವಿರಲಿಲ್ಲ. ಆದ್ದರಿಂದ ವಸತಿ ಸಚಿವರಾಗಿ ವಿಫಲವಾಗಿರುವ ಸೋಮಣ್ಣನವರ ಉತ್ತಮವಾಗಿ ಕೆಲಸ ಮಾಡುತ್ತೇನೆ ಎನ್ನುವ ಮಾತು ಸಂಪೂರ್ಣ ಸುಳ್ಳು ಎಂದರು.
ಕಳೆದ ಹತ್ತು ವರ್ಷದಿಂದ ಪ್ರಧಾನಿ ಮೋದಿಯವರು ಸಮಾಜದ ಯಾವ ವರ್ಗಕ್ಕೂ ಯಾವುದೇ ಕೆಲಸ ಮಾಡಲಿಲ್ಲ. ಜನರ ಖಾತೆಗೆ 15 ಲಕ್ಷ ಹಾಕಲಿಲ್ಲ. 2014ರಂದು ಮೋದಿಯವರು ಸುಳ್ಳು ಆಶ್ವಾಸನೆಗಳನ್ನು ನಿಡಿದ್ದಾರೆ. ನಿರುದ್ಯೋಗಿಗಳಿಗೆ 20 ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ. ಯುವಜನರಿಗೆ ಪಕೋಡಾ ಮಾರುವಂತೆ ಹೇಳಿದ ಮೋದಿಯವರು ಪ್ರಧಾನಿಯಾಗಲು ಯೋಗ್ಯರೇ ಎಂದು ನೀವೇ ನಿರ್ಧರಿಸಬೇಕು ಎಂದರು.