ಬೆಂಗಳೂರು, ಏ 25 (DaijiworldNews/MS): ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸಾಮಾಜಿಕ ನ್ಯಾಯದ ವಿರೋಧಿಯಾಗಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು ,ರಾಜ್ಯದಲ್ಲಿ ಬಿಜೆಪಿ ಪಕ್ಷ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ. ಹೀಗಾಗಿ ಸಾಮಾಜಿಕ ನ್ಯಾಯದ ವಿರೋಧಿ. ಸಬ್ ಕಾ ಸಾಥ್ – ಸಬ್ ಕಾ ವಿಕಾಸ್ ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಬೋಗಸ್ ಘೋಷಣೆಯಾಗಿದೆ ಎಂದು ಹೇಳಿದ್ದಾರೆ.
ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರಧಾನಿ ಮೋದಿ ಅವರು ಹೇಳುತ್ತಿರುವ ಹಸಿ ಸುಳ್ಳು ಅವರ ಅಜ್ಞಾನವನ್ನಷ್ಟೇ ಅಲ್ಲ ಸೋಲಿನ ಭೀತಿಯಲ್ಲಿರುವ ಅವರ ಹತಾಶೆಯನ್ನೂ ಸೂಚಿಸುತ್ತದೆ. ದೇಶದಲ್ಲಿ ಇಲ್ಲಿಯ ವರೆಗಿನ ಯಾರೂ ಕೂಡಾ ಪ್ರಧಾನಿ ಪಟ್ಟವನ್ನು ಇಂತಹ ಕೀಳು ಮಟ್ಟಕ್ಕೆ ಇಳಿಸಿಲ್ಲ ಎಂದು ಕಿಡಿಕಾರಿದ್ದಾರೆ.
ಮುಸ್ಲಿಂ ಮೀಸಲಾತಿಯನ್ನು ವಿರೋಧಿಸುತ್ತಿರುವ ಪ್ರಧಾನಿ ನರೇಂದ್ರಮೋದಿ್ ಹೇಳಿಕೆ ಬಗ್ಗೆ ಮೋದಿಯವರ ಆಪ್ತಮಿತ್ರ ಮತ್ತು ಬಿಜೆಪಿಯ ಹೊಸ ಸಂಗಾತಿಯಾಗಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪ್ರತಿಕ್ರಿಯೆ ಏನು ಎನ್ನುವುದನ್ನು ನಾನು ತಿಳಿದುಕೊಳ್ಳಬಯಸುತ್ತೇನೆ.ಕರ್ನಾಟಕದಲ್ಲಿ ಮುಸ್ಲಿಂ ಮೀಸಲಾತಿಯನ್ನು ಜಾರಿಗೊಳಿಸಿದ್ದೇ ನಾನು ಎಂದು ಕೊಚ್ಚಿಕೊಳ್ಳುತ್ತಿದ್ದ ದೇವೇಗೌಡರು ಈಗಲೂ ತಮ್ಮ ನಿಲುವಿಗೆ ಬದ್ಧರಾಗಿದ್ದಾರಾ? ಇಲ್ಲವೇ ನರೇಂದ್ರ ಮೋದಿಯವರಿಗೆ ಶರಣಾಗಿ ತಮ್ಮ ಹಿಂದಿನ ನಿಲುವನ್ನು ಬದಲಾಯಿಸಿಕೊಳ್ಳುತ್ತರಾ? ಎಂಬುದನ್ನು ಅವರು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.