ಬೆಂಗಳೂರು,ಮೇ 6(DaijiworldNews/AZM): ರಾಹುಲ್ ತಂದೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜೀವನವು ನಂ.1 ಭ್ರಷ್ಟಾಚಾರಿ ಎಂದೇ ಕೊನೆಗೊಂಡಿತು ಎಂದು ಪ್ರಧಾನಿ ಮೋದಿ ವಿವಾದಾತ್ಮಕ ಹೇಳಿಕೆಗೆ ಸಾಕಷ್ಟು ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿದ್ದು, ಮಾಜಿ ಸಿಎಂ ಸಿದ್ದರಾಮಯ್ಯನವರು ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕರು ‘ಮೈ ಚೌಕಿದಾರ್’ ಅಲ್ಲ ‘ಮೈ ಪಾಗಲ್’ ಎಂದು ಘೋಷಿಸಿಕೊಳ್ಳುವುದು ಒಳ್ಳೆಯದು ಎಂದು ಸಿದ್ದು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು,’ಹಿರಿಯಣ್ಣನ ಚಾಳಿ ಮನೆ ಮಂದಿಗೆಲ್ಲ’ ಎನ್ನುವಂತೆ ಸೋಲಿನ ಭೀತಿಯಲ್ಲಿರುವ ನರೇಂದ್ರ ಮೋದಿಯವರಿಂದ ಹಿಡಿದು ಈಶ್ವರಪ್ಪನವರವರೆಗೆ ಎಲ್ಲರ ನಾಲಿಗೆಗಳಲ್ಲಿ ಈ ಹತಾಶೆ ಕಾಣಿಸುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ‘ಮೈ ಚೌಕಿದಾರ್’ ಅಲ್ಲ, ‘ಮೈ ಪಾಗಲ್’ ಎಂದು ಬಿಜೆಪಿ ನಾಯಕರೆಲ್ಲ ಘೋಷಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳಿದ್ದಾರೆ.
ತಾಯಿಯಂತೆಯೇ ಉಗ್ರರಿಗೆ ಬಲಿಯಾದ ರಾಜೀವ್ ಗಾಂಧಿ ಅವರ ಬಗ್ಗೆ ನೀಚತನದ ಮಾತುಗಳನ್ನಾಡುತ್ತಿರುವ ನರೇಂದ್ರ ಮೋದಿಯವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ಚಿಕಿತ್ಸೆಗೆ ಬೇಕಾದ ವಿಶ್ರಾಂತಿಯನ್ನು ದೇಶದ ಮತದಾರರು ಈ ಬಾರಿ ನೀಡುತ್ತಾರೆ. ಅವರು ಈ ಕಾಯಿಲೆಯಿಂದ ಶೀಘ್ರ ಗುಣಮುಖರಾಗಲಿ. ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತೆ ಆಡುತ್ತಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.