ಶಿವಮೊಗ್ಗ, ಏ.27(DaijiworldNews/AA): ಮೊದಲ ಹಂತದ ಮತದಾನ ನಡೆದ ಕ್ಷೇತ್ರಗಳಲ್ಲಿ ನಡೆಸಿದ ಪ್ರಚಾರದಲ್ಲಿ ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳ ಕಾರ್ಡನ್ನೇ ಬಳಸಿದೆ. ಅದರೆ ಯೋಜನೆಗಳ ಕಾರ್ಡ್ ಮತದಾರರ ಮೇಲೆ ಯಾವುದೇ ಪ್ರಭಾವ ಬೀರಿಲ್ಲ ಎಂದು ಬಿಜೆಪಿ ರಾಜಾಧ್ಯಕ್ಷ ಬಿವೈ ವಿಜಯೇಂದ್ರ ಶನಿವಾರ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಬೂಟಾಟಿಕೆ, ಅಧಿಕಾರದ ಅಮಲಿನಲ್ಲಿ ತೆಗೆದುಕೊಳ್ಳುತ್ತಿರುವ ತಪ್ಪು ನಿರ್ಣಯಗಳು, ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಪ್ರದರ್ಶಿಸಿದ ಧೋರಣೆ ಮತ್ತು ತುಷ್ಟೀಕರಣದ ರಾಜಕಾರಣದಿಂದ ಜನ ಬೇಸತ್ತಿದ್ದಾರೆ. ಹೀಗಾಗಿ ಜನ ಸಿದ್ದರಾಮಯ್ಯ ಸರ್ಕಾರಕ್ಕೆ ಪಾಠ ಕಲಿಸಲು ನಿರ್ಧರಿಸಿದ್ದಾರೆ ಎಂದರು.
ಮೊದಲ ಹಂತದ ಚುನಾವನೆಯ ಬಳಿಕ ಲಭ್ಯವಾಗುತ್ತಿರುವ ಸುಳಿವುಗಳಿಂದ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಹೆಚ್ಚು ಕಡಿಮೆ ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುವುದು ಖಚಿತವಾಗುತ್ತಿದೆ. 10-12 ಸ್ಥಾನ ಗೆಲ್ಲುವ ಕನಸು ಕಾಣುತ್ತಿದ್ದ ಕಾಂಗ್ರೆಸ್ ಗೆ ನಿರಾಸೆಯಾಗಲಿದೆ ಎಂದು ಹೇಳಿದರು.