ನವದೆಹಲಿ, ಏ.27(DaijiworldNews/AA): ಕೇಂದ್ರ ಸರ್ಕಾರವು ಕರ್ನಾಟಕಕ್ಕೆ 3,454 ಕೋಟಿ ರೂಪಾಯಿ ಬರ ಪರಿಹಾರ ಘೋಷಿಸಿದೆ. ರಾಜ್ಯಕ್ಕೆ ಮಾತ್ರವಲ್ಲದೆ ತಮಿಳುನಾಡಿಗೆ ಕೂಡ ಚಂಡಮಾರುತ ಹಾಗೂ ಪ್ರವಾಹ ಪರಿಹಾರವೆಂದು 275 ಕೋಟಿ ರೂ. ನೀಡುವುದಾಗಿ ಘೋಷಣೆ ಮಾಡಿದೆ.
ರಾಜ್ಯ ಸರ್ಕಾರ 18,174 ಕೋಟಿ ರೂ. ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಬೇಡಿಕೆ ಇಟ್ಟಿತ್ತು. ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿರದ ಹಿನ್ನೆಲೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನ ಮೆಟ್ಟಿಲೇರಿತ್ತು. ಆ ಬಳಿಕ ಕೇಂದ್ರ ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಸುಪ್ರೀಂ ಕೋರ್ಟ್ ಗೆ ತಿಳಿಸಿತ್ತು. ಇದೀಗ ತಾನು ಹೇಳಿದಂತೆ ಕೇಂದ್ರವು ಪರಿಹಾರ ಘೋಷಿಸಿದೆ.
ಇನ್ನು ಕೇಂದ್ರದಿಂದ ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆಯಾದ ಹಿನ್ನೆಲೆ ಕೇಂದ್ರ ಗೃಹ ಇಲಾಖೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕೆಲ ಷರತ್ತುಗಳನ್ನು ವಿಧಿಸಿದ್ದು, ಬರ ಪರಿಹಾರ ಬಿಡುಗಡೆಯನ್ನು ರಾಜಕೀಯವಾಗಿ ಬಳಸಿಕೊಳ್ಳುವಂತಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಜಾಹೀರಾತು ನೀಡುವಂತಿಲ್ಲ. ರಾಜಕೀಯ ಭಾಷಣಗಳಲ್ಲಿ ಈ ಬಗ್ಗೆ ಉಲ್ಲೇಖಿಸುವಂತಿಲ್ಲ. ಬರ ಪರಿಹಾರದ ವಿಚಾರವಾಗಿ ಸುದ್ದಿಗೋಷ್ಠಿ ನಡೆಸುವಂತಿಲ್ಲ. ಬರ ಪರಿಹಾರದ ಹಣವನ್ನು ಬದಲಿ ಕಾರ್ಯಗಳಿಗೆ ಉಪಯೋಗಿಸುವಂತಿಲ್ಲ ಹಾಗೂ ನೀತಿ ಸಂಹಿತೆ ನಡುವೆ ಹೊಸ ಕಾರ್ಯಗಳನ್ನು ಮಾಡುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದೆ.