ಗುವಾಹಟಿ, ಏ.27(DaijiworldNews/AA): ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಮುಸ್ಲಿಂ ಲೀಗ್ನ ಪ್ರತಿರೂಪದಂತಿದೆ ಎನ್ನುವ ಬಿಜೆಪಿ ಆರೋಪವನ್ನು ನಿರಾಕರಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ಪ್ರಧಾನಿ ಮೋದಿ ಅವರು ಸುಳ್ಳಿನ ಸರದಾರ' ಎಂದು ವ್ಯಂಗ್ಯವಾಡಿದ್ದಾರೆ.
ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುವುದು, ಕಪ್ಪು ಹಣ ವಾಪಸ್ ತಂದು ಪ್ರತಿಯೊಬ್ಬರಿಗೂ 15 ಲಕ್ಷ ರೂ. ಕೊಡುತ್ತೇನೆ ಎಂದಿದ್ದು, ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಮೋದಿ ಹೇಳಿದ್ದೆಲ್ಲವೂ ಸುಳ್ಳು ಎಂದು ಅವರು ಕಿಡಿಕಾರಿದ್ದಾರೆ.
ದೇಶದಲ್ಲಿ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದೆ. ಶೇಕಡ 65ರಷ್ಟು ಯುವಜನತೆಗೆ ಉದ್ಯೋಗವಿಲ್ಲ. ಬಿಜೆಪಿಯು ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದು, ಅದನ್ನು ಶ್ರೀಮಂತರಿಗೆ ಮಾತ್ರ ನೀಡುತ್ತಿದೆ ಎಂದು ತಿಳಿಸಿದರು.
ಇನ್ನು ನಮ್ಮ ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರು 'ಭಾರತ್ ಜೋಡೊ ಯಾತ್ರೆ'ಯ ಮೂಲಕ ದೇಶವನ್ನು ಸುತ್ತಿದರೆ, ಮೋದಿ ಅವರು ಭಾರತ್ 'ತೋಡೊ'ಗಾಗಿ ಶ್ರಮಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.