ಬೆಂಗಳೂರು, ಏ. 28(DaijiworldNews/AA): ರಾಜ್ಯ ಸರ್ಕಾರ ನೀಡುತ್ತಿರುವ ಗ್ಯಾರಂಟಿಯಿಂದ ಜನಕ್ಕೆ ಅನುಕೂಲವಾಗಿದೆ. ಜನ ಕಾಂಗ್ರೆಸ್ನ ಗ್ಯಾರಂಟಿ ಯೋಜನೆಯಿಂದ ಜೀವನ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಕೇಂದ್ರ ಸರ್ಕಾರ ನೀಡಿದ ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಡಿಕೆಶಿ ಅವರು, ನಮ್ಮ ಗ್ಯಾರಂಟಿ ಜನರನ್ನು ರಕ್ಷಿಸುತ್ತಿದೆ. ಕರ್ನಾಟಕ ಸೆಪ್ಟೆಂಬರ್ನಲ್ಲಿ ಬರ ಪರಿಹಾರಕ್ಕೆ ಅರ್ಜಿ ಕೊಟ್ವಿತ್ತು. ಸೆಪ್ಟೆಂಬರ್ ನಿಂದ ಇಲ್ಲಿವರೆಗೂ 50 ಸಾವಿರ ಕೋಟಿ ರೂ. ಮತ್ತೆ ನಷ್ಟವಾಗಿದೆ ಎಂದರು.
ಇನ್ನು ನಾವೇನು ಭಿಕ್ಷೆ ಅಥವಾ ಅವರ ಮನೆಯ ದುಡ್ಡನ್ನು ಕೇಳಿದ್ದಾ? ನಾವು ರಾಜ್ಯದ ಜನರಿಗಾಗಿ ಪರಿಹಾರ ಕೇಳಿದ್ದೇವೆ. ಇಲ್ಲಿಯವರೆಗೆ ನಮ್ಮ ಕೈಲಾದ ಅನುದಾನ ನಾವು ಕೊಟ್ಟಿದ್ದೇವೆ. ಕರ್ನಾಟಕದ ಜನರಿಗೆ ನಿಮ್ಮ ಭಿಕ್ಷೆ ಬೇಡ. ನಮ್ಮ ಹಕ್ಕನ್ನು ನಮಗೆ ಕೊಡಿ ಎಂದು ಅವರು ಕಿಡಿಕಾರಿದ್ದಾರೆ.