ಬೆಂಗಳೂರು, ಏ.28(DaijiworldNews/AA): ಸತ್ಯದ ನಾಡಾಗಿರುವ ಕರ್ನಾಟಕಕ್ಕೆ ಆಗಮಿಸಲಿರುವ ಸುಳ್ಳಿನ ಸರದಾರರಾದ ಸನ್ಮಾನ್ಯ ನರೇಂದ್ರ ಮೋದಿ ಅವರಿಗೆ ಸ್ವಾಗತ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಕಾನೂನು ಪ್ರಕಾರ ಶಿಕ್ಷಾರ್ಹವಾಗಿರುವ ನಿಮ್ಮ ಸುಳ್ಳುಗಳ ಬಗ್ಗೆ ಯಾರೂ, ಯಾವುದೇ ಕ್ರಮ ಕೈಗೊಳ್ಳುವ ಸ್ಥಿತಿಯಲ್ಲಿ ಇಲ್ಲ ಎನ್ನುವುದು ನಮಗೂ ಗೊತ್ತಾಗಿದೆ. ಆದ್ದರಿಂದ ನಿಮಗೆ ಆತ್ಮಸಾಕ್ಷಿ ಇದ್ದರೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕೋರುತ್ತೇನೆ. ನಿಮ್ಮ ಇತ್ತೀಚಿನ ಅತಿದೊಡ್ಡ ಸುಳ್ಳಿನ ಬಗ್ಗೆ ಕೆಲವು ಪ್ರಶ್ನೆಗಳನ್ನು ನಿಮಗೆ ಕೇಳಬೇಕೆಂದಿದ್ದೇನೆ, ನಿಮ್ಮ ಇಂದಿನ ಭಾಷಣದಲ್ಲಿ ಆ ಪ್ರಶ್ನೆಗಳಿಗೆ ಉತ್ತರಿಸುವಿರೆಂದು ನಂಬಿದ್ದೇನೆ' ಎಂದು ಮೋದಿ ಅವರಿಗೆ ತಿಳಿಸಿದ್ದಾರೆ.
ಮೋದಿ ಅವರೇ, ‘ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತಿನ ಸಮೀಕ್ಷೆ ನಡೆಸಿ ಹಿಂದೂಗಳ ಸಂಪತ್ತನ್ನು ಏಳೇಳು ಮಕ್ಕಳು ಹುಟ್ಟಿಸುವ ಮುಸ್ಲಿಮರಿಗೆ ಹಂಚಿಕೆ ಮಾಡುತ್ತಾರೆ ಎಂಬ ಅಪ್ಪಟ ಸುಳ್ಳನ್ನು ನಿರ್ಲಜ್ಜವಾಗಿ ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದಿರಲ್ಲಾ? ಇದಕ್ಕೆ ನಿಮ್ಮಲ್ಲಿ ಆಧಾರ ಏನಿದೆ? ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆಯ ಯಾವ ಪುಟದಲ್ಲಿ ಈ ಭರವಸೆ ಇದೆ? ಯಾವ ಹಿರಿಯ ನಾಯಕರು ಇದನ್ನು ಹೇಳಿದ್ದಾರೆ? ದಯವಿಟ್ಟು ತಿಳಿಸಿ ಇಲ್ಲವಾದರೆ ಸುಳ್ಳು ಆರೋಪಕ್ಕಾಗಿ ಕನಿಷ್ಠ ವಿಷಾದವನ್ನಾದರೂ ಸೂಚಿಸಿ' ಎಂದಿದ್ದಾರೆ.
ಪಿತ್ರಾರ್ಜಿತ ಆಸ್ತಿ ತೆರಿಗೆ ಹೇರುವ ಬಗ್ಗೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಎಲ್ಲಿಯೂ ಹೇಳಿಲ್ಲ. ಪಿತ್ರಾರ್ಜಿತ ಆಸ್ತಿ ತೆರಿಗೆ ವಿಚಾರದ ಚರ್ಚೆ ಶುರುಮಾಡಿರುವುದೇ ನಿಮ್ಮ ಸಹದ್ಯೋಗಿಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಈಗ ನಿರ್ಮಲಾ ಸೀತಾರಾಮನ್ ಅವರನ್ನೂ ದೇಶದ್ರೋಹಿ ಪಟ್ಟಿಗೆ ಸೇರಿಸುವಿರಾ? ಎಂದು ಪ್ರಶ್ನಿಸಿದ್ದಾರೆ.