ಬೆಂಗಳೂರು, ಏ.29(DaijiworldNews/AK): ಇದೆಲ್ಲ ರಾಜಕೀಯ ಪ್ರೇರಿತ ಎಂದು ಜೆಡಿಎಸ್ ನಾಯಕ ಎಚ್.ಡಿರೇವಣ್ಣಆರೋಪವನ್ನು ತಳ್ಳಿ ಹಾಕಿದ್ದಾರೆ.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಈ ಪ್ರಕರಣದಲ್ಲಿ ಕೇಳಿಬಂದಿರುವ ಆರೋಪಗಳನ್ನು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ.
ತಮ್ಮ ಮಗ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್ ಡಿ ರೇವಣ್ಣ, ಆತ ಎಲ್ಲೋ ಹೋಗಿರಬಹುದು. ಆದರೆ ವಿಚಾರಣೆಗೆ ಕರೆದರೆ ಬರುತ್ತಾನೆ ಎಂದು ಮಾಜಿ ಸಚಿವರೂ ಆದ ರೇವಣ್ಣ ಸ್ಪಷ್ಟಪಡಿಸಿದ್ದಾರೆ.
ನಾನೆಲ್ಲೂ ಓಡಿ ಹೋಗಿಲ್ಲ. ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಿ. ನಾವು ಕಾನೂನು ರೀತಿ ಈ ಪ್ರಕರಣವನ್ನು ಎದುರಿಸುತ್ತೇವೆ. ಪ್ರಜ್ವಲ್ ಹೋಗಬೇಕಿತ್ತು ಹೋಗಿದಾನೆ. ಕರೆದರೆ ಬರುತ್ತಾನೆ. ತನಿಖೆಗೆ ಕರೆದಾಗ ಪ್ರಜ್ವಲ್ ಬರುತ್ತಾನೆ ಎಂದು ಎಚ್.ಡಿ. ರೇವಣ್ಣ ಹೇಳಿದ್ದಾರೆ.
ಇದೆಲ್ಲಾ ರಾಜಕೀಯ. ಸರ್ಕಾರ ಅವರದು ಇದೆ. ಏನು ಬೇಕಾದರೂ ಮಾಡಲಿ. ತನಿಖೆ ನಡೆಸಿ ಕಾನೂನಿನ ರೀತಿ ಏನಿದೆ ಅದಾಗಲಿ. ದೆವೇಗೌಡರ ಕುಟುಂಬದ ಮೇಲೆ ಆರೋಪ ಇವೇನೂ ಹೊಸದಲ್ಲ. ಮೊದಲಿಂದಲೂ ಇಂಥವನ್ನು ಎದುರಿಸಿದ್ದೇವೆ. ದೇವೇಗೌಡರ ಕುಟುಂಬದ ಮೇಲೆ ಲೋಕಾಯುಕ್ತ, ಸಿಐಡಿ ತನಿಖೆ ಇವೆಲ್ಲವನ್ನೂ ಎದುರಿಸಿದ್ದೇವೆ ಎಂದರು.
ಕಳೆದ ವಾರ ಚುನಾವಣೆಗೆ ಮುನ್ನ ಪ್ರಜ್ವಲ್ ರೇವಣ್ಣರ ಲೈಂಗಿಕ ದೌರ್ಜನ್ಯದ ಹಲವು ವಿಡಿಯೋಗಳಿದ್ದ ಪೆನ್ ಡ್ರೈವ್ ಪ್ರಕರಣ ಬೆಳಕಿಗೆ ಬಂದಿತ್ತು. ಎಚ್ ಡಿ ರೇವಣ್ಣ ವಿರುದ್ಧವೂ ಲೈಂಗಿಕ ದೌರ್ಜನ್ಯದ ಆರೋಪಗಳಿವೆ. ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಅಪ್ಪ ಮತ್ತು ಮಗ ಪ್ರಮುಖ ಆರೋಪಿಗಳಾಗಿದ್ದಾರೆ.