ವಿಜಯನಗರ, ಏ.2(DaijiworldNews/AK): ಮೋದಿ ಪ್ರಧಾನಿಯಾದಿ ಇಡಿ ದೇಶದ ಜನರ ಕೈಗೆ ಚೊಂಬು ಕೊಟ್ಟರು. ಶ್ರೀರಾಮುಲು ಸಚಿವರಾಗಿ, ಸಂಸದರಾಗಿ ಬಳ್ಳಾರಿ ಜಿಲ್ಲೆಗೆ ಚೊಂಬು ಕೊಟ್ಟರು ಎಂದು ಸಿ.ಎಂ.ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಬಳ್ಳಾರಿ-ವಿಜಯನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಅವರ ಗೆಲುವಿನ ಸಂದೇಶ ನೀಡಲು ಕೂಡ್ಲಿಗಿಯಲ್ಲಿ ಸಂಘಟಿಸಿದ್ದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಮೋದಿ ಮತ್ತು ಶ್ರೀರಾಮುಲು ಬಳ್ಳಾರಿ ಜನಕ್ಕೆ ಕೊಟ್ಟ ಚೊಂಬನ್ನು ನೀವು ಶ್ರೀರಾಮುಲು ಕೈಗೆ ವಾಪಾಸ್ ಕೊಡಿ ಎಂದು ಸಿ.ಎಂ.ಸಿದ್ದರಾಮಯ್ಯ ಕರೆ ನೀಡಿದರು.
ತಾವು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಮೋದಿಯವರಿಗೆ ಖಚಿತವಾಗಿದೆ.ಆಕ್ಸಿಸ್ ಪ್ರಕಟಿಸಿದ ಖಚಿತವಾದ ಸಮೀಕ್ಷೆಗಳನ್ನು ಮೋದಿ ಡಿಲೀಟ್ ಮಾಡಿಸುತ್ತಿರುವುದಕ್ಕೆ ಸೋಲಿನ ಭಯವೇ ಕಾರಣ. ಸೋಲು ಖಚಿತವಾಗುತ್ತಿದ್ದಂತೆ ಹೆಚ್ಚೆಚ್ಚು ಸುಳ್ಳುಗಳನ್ನು ಸೃಷ್ಟಿಸಿ ಭಾರತೀಯರ ನಡುವೆ ಬಿರುಕು ಮೂಡಿಸುತ್ತಾರೆ ಜಾಗ್ರತೆ ವಹಿಸಿ ಎಂದು ಸಿ.ಎಂ.ಎಚ್ಚರಿಕೆ ನೀಡಿದರು.
ಆಕ್ಸಿಸ್ ಪ್ರಕಟಿಸಿದ ಖಚಿತವಾದ ಸಮೀಕ್ಷೆಗಳನ್ನು ಮೋದಿ ಡಿಲೀಟ್ ಮಾಡಿಸುತ್ತಿರುವುದಕ್ಕೆ ಸೋಲಿನ ಭಯವೇ ಕಾರಣ. ಬಿಜೆಪಿ 200 ಸ್ಥಾನ ಗೆದ್ದರೆ ಹೆಚ್ಚು ಎನ್ನುವ ಸಮೀಕ್ಷೆಗಳು ಬಂದಿವೆ. ತಮ್ಮ ಸೋಲನ್ನು ಖಚಿತಪಡಿಸುವ ಸಮೀಕ್ಷೆಗಳನ್ನು ಡಿಲೀಟ್ ಮಾಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಮೋದಿ ಮಾಮೂಲಾಗಿಯೇ ಹಸಿ ಹಸಿ ಸುಳ್ಳು ಹೇಳುತ್ತಾರೆ. ಈಗ ಇವರ ಸೋಲಿನ ಖಚಿತ ಸಮೀಕ್ಷೆಗಳು ಬರುತ್ತಿದ್ದಂತೆ ಭಯಾನಕವಾದ ಸುಳ್ಳುಗಳನ್ನು ಸೃಷ್ಟಿಸಿ ಹೋದಲ್ಲಿ ಬಂದಲ್ಲಿ ಸುಳ್ಳು ಹಂಚುತ್ತಾ ಅಡ್ಡಾಡುತ್ತಾರೆ. ಇವರ ಸುಳ್ಳುಗಳಿಗೆ ಭಾರತೀಯರು ಮತ್ತೆ ಮತ್ತೆ ತಲೆ ಒತ್ತೆ ಇಡುವುದಿಲ್ಲ ಎಂದರು.
ಮೀಸಲಾತಿ ವಿಷಯ ಪ್ರಸ್ತಾಪಿಸಿ ಹಿಂದುಳಿದವರನ್ನು ಮುಸ್ಲೀಮರ ವಿರುದ್ಧ ಎತ್ತಿಕಟ್ಟುವ ಮೋದಿ ಸ್ಕೆಚ್ ವಿಫಲಗೊಳಿಸಿ ಎಂದು ಕರೆ ನೀಡಿದರು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಮಹಿಳೆಯರ ಖಾತೆಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಬಂದು ಬೀಳತ್ತೆ. ನಿರುದ್ಯೋಗಿಗಳ ಖಾತೆಗೂ ಒಂದು ಲಕ್ಷ ರೂಪಾಯಿ ಜಮೆ ಆಗ್ತದೆ. ಇಡಿ ದೇಶದ ರೈತರ ಸಾಲ ಮನ್ನಾ ಆಗ್ತದೆ ಎಂದರು.
ಕಾಂಗ್ರೆಸ್ಸಿನ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಆದರೆ ಮೋದಿ ಅಂಬಾನಿ, ಅದಾನಿಯಂತಹ ಆಗರ್ಭ ಶ್ರೀಮಂತರ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದರು.ರೈತರ ಸಾಲ ಮನ್ನಾ ಮಾಡಲು ಒಪ್ಪದ ಮೋದಿ ಯಾರ ಪರ ಎನ್ನುವುದನ್ನು ದೇಶದ ಜನರಿಗೆ ಮನವರಿಕೆಯಾಗಿದೆ ಎಂದರು.