ನವದೆಹಲಿ, ಏ 30(DaijiworldNews/AA): ಕರ್ನಾಟಕ ಬರ ಪರಿಹಾರದ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಿದ್ದಕ್ಕೆ ಧನ್ಯವಾದಗಳು. ಆದರೆ, ಬಿಡುಗಡೆ ಮಾಡಿರುವ ಪರಿಹಾರದ ಮೊತ್ತ ಕಡಿಮೆಯಾಗಿದೆ. ಇದು ಅಸಮಂಜಸವಾಗಿದೆ. ತಜ್ಞರ ತಂಡದ ವರದಿ ಏನು ಎಂದು ರಾಜ್ಯಕ್ಕೆ ತಿಳಿದಿಲ್ಲ. ಅದರ ಪ್ರತಿಯನ್ನ ಸಹ ರಾಜ್ಯಕ್ಕೆ ನೀಡಿಲ್ಲ. ಆದ್ದರಿಂದ, ಆ ವರದಿ ಪ್ರತಿಯನ್ನ ಕೋರ್ಟ್ ಮುಂದೆ ಇಡಬೇಕು. ಅದರ ಅನ್ವಯ ಪರಿಹಾರ ನೀಡುವುದಕ್ಕೆ ನಮ್ಮದು ಯಾವ ತಕರಾರಿಲ್ಲ ಎಂದು ಕರ್ನಾಟಕ ಪರ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ.
ಬಳಿಕ ವಾದ ಮಂಡಿಸಿದ ಕೇಂದ್ರ ಸರ್ಕಾರದ ಪರ ವಕೀಲರು ತಜ್ಞರ ಸಮಿತಿಯ ಶಿಫಾರಸಿನ ಆಧಾರದಲ್ಲಿ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆಗೊಳಿಸಿದೆ. ಜೊತೆಗೆ ಈ ಕುರಿತಂತೆ ಪ್ರತಿಕ್ರಿಯೆ ನೀಡಲು ಸ್ವಲ್ಪ ಸಮಯ ಬೇಕು ಎಂದು ಹೇಳಿದ್ದಾರೆ.
ವಾದ ವಿವಾದವನ್ನು ಆಲಿಸಿದ ಸುಪ್ರೀಂ ಕೇಂದ್ರ ಸರ್ಕಾರದ ಮನವಿ ನಿರಾಕರಿಸಿದೆ. ಮುಂದಿನ ಸೋಮವಾರದ ಒಳಗೆ ತಜ್ಞರ ವರದಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಬಳಿಕ ವಿಚಾರಣೆಯನ್ನ ಮುಂದಿನ ಸೋಮವಾರಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದೆ.