ಬೆಳಗಾವಿ, ಮೇ.1(DaijiworldNews/AA): ನನ್ನ ಬಂಗಾರದಂಥಾ ಮಗನನ್ನು ನಿಮ್ಮೆಲ್ಲರ ಸೇವೆಗೆ ಧಾರೆ ಎರೆಯುತ್ತೇನೆ. ಸೆರಗೊಡ್ಡಿ ಕೇಳುತ್ತೇನೆ ನನ್ನ ಮಗನಿಗೆ ಮತ ಹಾಕಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿಕೊಂಡಿದ್ದಾರೆ.
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಬ್ಬಾಳ್ಕರ್ ಕುಟುಂಬಕ್ಕೆ ರಾಜಕೀಯ ಶಕ್ತಿಯನ್ನು ನೀವು ತುಂಬಿ. ನನ್ನ ಕೊನೆಯ ಉಸಿರಿರುವವರೆಗೂ ನಿಮ್ಮೆಲ್ಲರ ಸೇವೆ ಮಾಡಿ ಋಣ ತೀರಿಸುತ್ತೇನೆ. ನಿಮ್ಮ ಮನೆಯ ಮಗಳಾದ ನಾನು ನಿಮ್ಮ ಮನೆಯ ಬಾಗಿಲಿಗೇ ಬಂದಿದ್ದೀನಿ. ನನ್ನ ಮಗನಿಗೆ ಮತ ಭಿಕ್ಷೆ ಹಾಕಿ ಎಂದು ಕೇಳಿದ್ದಾರೆ.
ಇನ್ನು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಮ್ಮ ಸಂವಿಧಾನವನ್ನು ಬದಲಾಯಿಸಿಬಿಡುತ್ತೇನೆ ಎನ್ನುವ ಭಾಷಣ ಮಾಡುತ್ತಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ನಾವೆಲ್ಲರೂ ಭಗವದ್ಗೀತೆ ಎಂದು ನಂಬುತ್ತೇವೆ. ಪ್ರಜಾಪ್ರಭುತ್ವ ಈ ದೇಶದಲ್ಲಿ ಉಳಿಯಬೇಕಾದರೆ ಅದಕ್ಕೆ ಯಾರಾದ್ರೂ ಕಾರಣ ಅಂದ್ರೆ ಅದು ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ ಎಂದಿದ್ದಾರೆ.