ನವದೆಹಲಿ, ಮೇ.1(DaijiworldNews/AK):ಮುಸ್ಲಿಮರು ಮಾತ್ರ ಹೆಚ್ಚು ಮಕ್ಕಳನ್ನು ಹೊಂದುತ್ತಾರೆಯೇ? ನನಗೂ ಐದು ಜನ ಮಕ್ಕಳು ಎಂದು ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.
ಛತ್ತೀಸ್ಗಢದ ಜಾಂಜ್ಗೀರ್-ಚಂಪಾ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾ ಬಣ ಬಹುಮತದತ್ತ ಸಾಗುತ್ತಿದೆ. ಹೀಗಾಗಿ ಪ್ರಧಾನಿ ಮೋದಿ ಹತಾಶರಾಗಿದ್ದಾರೆ. ಪ್ರಧಾನಿ ಈಗ ಮಂಗಳಸೂತ್ರ ಮತ್ತು ಮುಸ್ಲಿಮರ ಬಗ್ಗೆ ಮಾತನಾಡಲು ಇದೇ ಕಾರಣ ಎಂದು ತಿರುಗೇಟು ನೀಡಿದ್ದಾರೆ.
ನಿಮ್ಮ ಸಂಪತ್ತನ್ನು ಕದ್ದು ಹೆಚ್ಚು ಮಕ್ಕಳಿರುವವರಿಗೆ ಕೊಡುತ್ತೇವೆ ಎನ್ನುತ್ತಿದ್ದಾರೆ. ಮುಸ್ಲಿಮರು ಮಾತ್ರ ಹೆಚ್ಚು ಮಕ್ಕಳನ್ನು ಹೊಂದುತ್ತಾರೆಯೇ? ಬಡವರು ಯಾವಾಗಲೂ ಹೆಚ್ಚು ಮಕ್ಕಳನ್ನು ಹೊಂದಿರುತ್ತಾರೆ ಎಂದು ಖರ್ಗೆ ಹೇಳಿದ್ದಾರೆ.
ಬಡವರು (ಹೆಚ್ಚು) ಮಕ್ಕಳನ್ನು ಹೊಂದಿದ್ದಾರೆ. ಏಕೆಂದರೆ ಅವರ ಬಳಿ ಸಂಪತ್ತು ಇಲ್ಲ. ಆದರೆ ನೀವು (ಪ್ರಧಾನಿ ಮೋದಿ) ಮುಸ್ಲಿಮರ ಬಗ್ಗೆ ಏಕೆ ಮಾತನಾಡುತ್ತಿದ್ದೀರಿ? ಮುಸ್ಲಿಮರು ಈ ದೇಶದವರು ಎಂದು ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ನನಗೂ ಐವರು ಮಕ್ಕಳು. ಆದರೆ ನನ್ನ ತಂದೆ-ತಾಯಿಗೆ ನಾನೊಬ್ಬನೇ ಮಗ ಎಂದು ತಿಳಿಸಿದ್ದಾರೆ.