ಬೆಂಗಳೂರು, ಮೇ.1(DaijiworldNews/AK):ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ದೇಶದ ಜನರು ತೀರ್ಮಾನ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿಶ್ವಾಸದಿಂದ ನುಡಿದರು.
ಕಲಬುರಗಿ ಲೋಕಸಭಾ ಕ್ಷೇತ್ರದ ಚಿತ್ತಾಪುರದಲ್ಲಿ ಇಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಡಾ. ಉಮೇಶ್ ಜಾಧವ್ ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ರಾಜ್ಯ ಮಾತ್ರವಲ್ಲದೆ, ರಾಷ್ಟ್ರದಾದ್ಯಂತ ಜನರು ದೇಶದ ಸುರಕ್ಷತೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಬಯಸುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಸಾಮಾನ್ಯ ಜನರಲ್ಲೂ ಮೋದಿಯವರ ನಾಯಕತ್ವದ ಕುರಿತು ವಿಶ್ವಾಸ ಹೆಚ್ಚಾಗಿದೆ. ಕಳೆದ 10 ವರ್ಷಗಳಲ್ಲಿ ಮೋದಿಯವರು ದೇಶದ ಪ್ರಧಾನಿಯಾದ ಬಳಿಕ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಅವರು ಕೆಲಸ ಮಾಡುತ್ತಿದ್ದಾರೆ. ಹಿಂದೆ ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ‘ನಾನು ಪ್ರಧಾನಿಯಾಗಿ 100 ರೂ. ಕಳಿಸಿದರೆ ಅದು ಚಿತ್ತಾಪುರಕ್ಕೆ ಹೋಗಿ ತಲುಪಿದಾಗ ಬರೀ 15-20 ರೂ. ಆಗುತ್ತದೆ’ ಎಂದಿದ್ದರು.ಇನ್ನುಳಿದ 80-85 ರೂಪಾಯಿ ಮಧ್ಯಸ್ಥಿಕೆದಾರರ ಪಾಲಾಗುತ್ತದೆ ಎಂದು ತಿಳಿಸಿದ್ದರು ಎಂದು ನೆನಪಿಸಿದರು.
ಮೋದಿಜೀ ಅವರು ಪ್ರಧಾನಿಯಾದ ಬಳಿಕ ಪ್ರತಿಯೊಬ್ಬ ಬಡವರಿಗೆ ಬ್ಯಾಂಕ್ ಖಾತೆ ತೆಗೆಸಿ ಮೋದಿಯವರು ಕೊಡುವ ಸೌಲಭ್ಯಗಳು ಮಧ್ಯಸ್ಥಿಕೆಯ ಹಾವಳಿ ಇಲ್ಲದೆ 100 ರೂ. ಅನುದಾನದಲ್ಲಿ 100 ರೂ. ತಲುಪುವ ಕೆಲಸ ಆಗಿದ್ದರೆ ಅದು ಬಿಜೆಪಿ ನೇತೃತ್ವದ ಮೋದಿಜೀ ಅವರ ಕಾರ್ಯ ಎಂದು ವಿಶ್ಲೇಷಿಸಿದರು. ಕಿಸಾನ್ ಸಮ್ಮಾನ್ ಯೋಜನೆಯ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ 6 ಸಾವಿರವನ್ನು ನೇರವಾಗಿ ಖಾತೆಗೆ ಹಾಕಲಾಗುತ್ತಿತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಇದ್ದಾಗ ರೈತರಿಗೆ ಅನುಕೂಲ ಆಗಲು ಹೆಚ್ಚುವರಿ 4 ಸಾವಿರ ಕೊಟ್ಟರು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಆ 4 ಸಾವಿರ ರೂ. ನಿಲ್ಲಿಸಿದರು ಎಂದು ಟೀಕಿಸಿದರು.