ಬೆಂಗಳೂರು, ಮೇ.1(DaijiworldNews/AK): ತಮ್ಮ ಮತಬ್ಯಾಂಕಿಗಾಗಿ ಕರ್ನಾಟಕ ಸುರಕ್ಷತೆಗೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಕ್ಷೇಪಿಸಿದರು.
ಧಾರವಾಡ ಲೋಕಸಭಾ ಕ್ಷೇತ್ರದ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಇಂದು ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಅವರು, ದೇಶ ಸುರಕ್ಷತೆಗೆ ಶ್ರಮಿಸುವ ನರೇಂದ್ರ ಮೋದಿಜೀ ಮತ್ತು ದೇಶವಿರೋಧಿಗಳನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷದ ನಡುವೆ ಒಬ್ಬರನ್ನು ಕರ್ನಾಟಕದ ಮತದಾರರು ಆಯ್ಕೆ ಮಾಡಬೇಕು ಎಂದು ತಿಳಿಸಿದರು.
ಪ್ರಲ್ಹಾದ್ ಜೋಶಿಯವರಿಗೆ ನೀಡಿದ ಪ್ರತಿಮತವು ಮೋದಿಯವರ ಕೈಗಳನ್ನು ಬಲಪಡಿಸಲಿದೆ ಹಾಗೂ ನಕ್ಸಲ್ವಾದ, ಆತಂಕವಾದವನ್ನು ಅಂತ್ಯಗೊಳಿಸಲಿದೆ; ಹಾಗೂ ಭಾರತವನ್ನು ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗಿ ಮಾರ್ಪಡಿಸಲಿದೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಲು ಎಲ್ಲ 28 ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿ ನರೇಂದ್ರ ಮೋದಿಯವರ ಕೈಗಳನ್ನು ಬಲಪಡಿಸಿ ಎಂದು ವಿನಂತಿಸಿದರು.
ಕಾಶ್ಮೀರವೇ ಇರಲಿ, ಕನ್ಯಾಕುಮಾರಿ, ಬಂಗಾಲ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ಕರ್ನಾಟಕ ಸೇರಿ ಎಲ್ಲೆಡೆ ಮೋದಿ ಮೋದಿ ಎಂಬ ಘೋಷಣೆ ಕೇಳಿಸುತ್ತಿದೆ. ದೇಶದ ನಾಲ್ಕೂ ದಿಕ್ಕಿನಲ್ಲಿ ನರೇಂದ್ರ ಮೋದಿಯವರನ್ನು ಗೆಲ್ಲಿಸುವ ದೃಢಸಂಕಲ್ಪ ಕೇಳಿಸುತ್ತಿದೆ. ನಾನು ಇಲ್ಲಿ ಪ್ರಲ್ಹಾದ್ ಜೋಶಿ ಅವರನ್ನು ಗೆಲ್ಲಿಸಲು ಮನವಿ ಮಾಡಲು ಬಂದಿಲ್ಲ. ಜೋಶಿಯವರನ್ನು ಗರಿಷ್ಠ ಮತಗಳ ಅಂತರದಿಂದ ಗೆಲ್ಲಿಸಬೇಕು. ಮುಂದಿನ ಬಾರಿ ಅವರ ವಿರುದ್ಧ ಯಾರೂ ಸ್ಪರ್ಧಾಕಣಕ್ಕೆ ಇಳಿಯದಂತೆ ನೋಡಿಕೊಳ್ಳಿ ಎಂದು ವಿನಂತಿಸಿದರು.
ಕಾಶ್ಮೀರ ನಮ್ಮದಲ್ಲವೇ ಎಂದು ಪ್ರಶ್ನಿಸಿದ ಅವರು, ಖರ್ಗೆಯವರು ನಮಗೆ ಕಾಶ್ಮೀರದ ಜೊತೆಗೇನು ಸಂಬಂಧ ಎನ್ನುತ್ತಾರೆ. ಆದರೆ, ಇಲ್ಲಿನ ಜನತೆ ಕಾಶ್ಮೀರಕ್ಕಾಗಿ ತಮ್ಮ ಪ್ರಾಣವನ್ನೇ ಕೊಡಲು ಸಿದ್ಧರಿದ್ದಾರೆ ಎಂದು ಹೇಳಿದರು. 370ನೇ ವಿಧಿ ರದ್ದು ಮಾಡಬೇಕಿತ್ತಲ್ಲವೇ ಎಂದು ಕೇಳಿದರು. ಕಾಂಗ್ರೆಸ್ ಪಕ್ಷವು ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ಮೋದಿಜೀ ಅವರು ರದ್ದು ಮಾಡಿದ್ದಾರೆ ಎಂದು ತಿಳಿಸಿದರು.
ರಾಹುಲ್ ಬಾಬಾ ಅವರು ಸಂಸತ್ತಿನಲ್ಲಿ ಆಗ ಮಾತನಾಡಿದ್ದರು. ಅವರು ಸಂಸತ್ತಿನಲ್ಲಿ ಮಾತನಾಡದೇ ಇದ್ದರೆ ಕಾಂಗ್ರೆಸ್ ಪಕ್ಷಕ್ಕೆ ಒಳಿತಾಗುತ್ತದೆ ಎಂದು ನನಗೆ ಅನಿಸಿದ್ದಿದೆ ಎಂದು ತಿಳಿಸಿದರು.
ಕರ್ನಾಟಕದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ನಡುವೆ ಆಂತರಿಕ ಸಮರ ನಡೆದಿದೆ ಎಂದ ಅವರು, ಜೆಡಿಎಸ್ನ ಮುಖಂಡ ರೇವಣ್ಣ ಅವರ ಪುತ್ರನ ಸಿ.ಡಿ. ವಿಚಾರವನ್ನೂ ಪ್ರಸ್ತಾಪಿಸಿದರು.
ಮಹಿಳಾ ಅತ್ಯಾಚಾರಿಗಳ ಜೊತೆ ಬಿಜೆಪಿ ನಿಲ್ಲುವುದಿಲ್ಲ : ಶಾ
ಮಹಿಳಾ ಅತ್ಯಾಚಾರಿಗಳ ಜೊತೆ ಬಿಜೆಪಿ ನಿಲ್ಲುವುದಿಲ್ಲ ಎಂದು ಅವರು ಪ್ರಕಟಿಸಿದರು. ಕಾಂಗ್ರೆಸ್ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕಿತ್ತು. ಅವರಿಗೆ ಪರಾರಿಯಾಗಲು ಅವಕಾಶ ಕೊಡಬಾರದಿತ್ತು ಎಂದು ತಿಳಿಸಿದರು. ಇಂಥವರಿಗೆ ಕೂಡಲೇ ಕಠಿಣ ಶಿಕ್ಷೆ ವಿಧಿಸಬೇಕು ಎಂದು ತಿಳಿಸಿದರು.
ಕರ್ನಾಟಕದ ಬಾಲಕಿಯರಿಗೆ ಸುರಕ್ಷತೆ ನೀಡಲು ಆಗುತ್ತಿಲ್ಲ:
ನೇಹಾ ಹಿರೇಮಠ ಅವರ ಹತ್ಯೆಗೆ ಯಾರು ಹೊಣೆಗಾರರು ಎಂದು ಪ್ರಶ್ನಿಸಿದರು. ಕರ್ನಾಟಕದ ಬಾಲಕಿಯರಿಗೆ ಸುರಕ್ಷತೆ ನೀಡಲು ಇವರಿಂದ ಆಗುತ್ತಿಲ್ಲ ಎಂದು ಆಕ್ಷೇಪಿಸಿದರು. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗಲಾಗುತ್ತದೆ. ಇದು ವಿಡಿಯೋದಲ್ಲಿ ತಮಗೆ ಕೇಳಿಸಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ ಎಂದು ಟೀಕಿಸಿದರು. ಕೇಳಿಸದೆ ಇದ್ದರೆ ಕಿವಿ ತಪಾಸಣೆ ಮಾಡಿಸಿಕೊಳ್ಳಿ ಎಂದು ಸವಾಲು ಹಾಕಿದರು.