ಬೆಂಗಳೂರು, ಮೇ.1(DaijiworldNews/AK): ಕಾಂಗ್ರೆಸ್ಸಿಗೆ ನಾಯಕ ಯಾರು? ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮಾಜಿ ಸಚಿವ ಸಿ.ಟಿ.ರವಿ ಅವರು ಪ್ರಶ್ನಿಸಿದರು.
ಬೆಳಗಾವಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ಇಂಡಿ ಒಕ್ಕೂಟದ ನಾಯಕ ಯಾರು ಎಂದು ಕೇಳಿದರು. ನಿಮಗೆ ನೀತಿಯೂ ಇಲ್ಲ; ನೇತೃತ್ವವೂ ಇಲ್ಲ ಎಂದು ಟೀಕಿಸಿದರು.ನಿಮ್ಮ ನೀತಿ ಏನೆಂಬುದನ್ನು ನಿಮ್ಮ ಮಾತುಗಳೇ ಸಾಬೀತುಪಡಿಸುತ್ತವೆ ಎಂದು ಆಕ್ಷೇಪಿಸಿದರು.
ರಾಹುಲ್ ಗಾಂಧಿಯವರು ಮೊಹಬ್ಬತ್ ಕೆ ದೂಕಾನ್ನ ಮಾತನಾಡುತ್ತಿದ್ದರು. ಅವರ ಈ ದೂಕಾನ್ನಲ್ಲಿ ನಫರತ್ನ ಬಿಕರಿ ಆಗುತ್ತಿದೆ. ‘ಬಿಜೆಪಿಯವರ ಮನೆ ಹಾಳಾಗಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ.
ದೇಶದ ಅತಿ ಹೆಚ್ಚು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ, ಅತಿ ಹೆಚ್ಚು ಜನರು ಮತ ಹಾಕಿದ, ಅತಿ ಹೆಚ್ಚು ಸಂಸದರು, ಶಾಸಕರು ನಾಶವಾಗಲಿ ಎಂದರೆ ಭಾರತವೇ ನಾಶವಾಗಲಿ ಅವರು ಬಯಸಿದಂತೆ ಕಾಣುತ್ತದೆ ಎಂದು ವಿಶ್ಲೇಷಿಸಿದರು.
ನಿನ್ನೆ ಕಾಂಗ್ರೆಸ್ ಪಕ್ಷದ ಕಾಗವಾಡ ಕ್ಷೇತ್ರದ ಶಾಸಕರು ‘ಮೋದಿ ಸತ್ತರೆ ಬೇರ್ಯಾರೂ ಪ್ರಧಾನಿ ಆಗಲ್ವೇನೋ’ ಎಂದಿದ್ದಾರೆ. ಅಲ್ಲದೆ, ‘ಕಾಂಗ್ರೆಸ್ ಪಕ್ಷಕ್ಕೆ ಕಡಿಮೆ ಲೀಡ್ ಕೊಟ್ಟರೆ, ಕರೆಂಟ್ ಕಟ್ ಮಾಡುತ್ತೇವೆ’ ಎಂದು ಹೇಳಿ ಮತದಾರರಿಗೆ ಬೆದರಿಕೆ ಹಾಕಿದ್ದಾರೆ. ಇದು ಇವರ ಮೊಹಬ್ಬತ್ ಕೀ ದೂಕಾನ್ನ ಪ್ರೀತಿಯ ಮಾತುಗಳು ಎಂದು ಟೀಕಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಅಪಾರ್ಟ್ಮೆಂಟಿನ ಸಭೆಗಳಲ್ಲಿ ಮಾತನಾಡಿ, ಕಾಂಗ್ರೆಸ್ಸಿಗೆ ಮತ ಕೊಡದೆ ಇದ್ದರೆ ನೀರು, ಸ್ವಚ್ಛತೆಗೆ ಸಮಸ್ಯೆ ಆಗಬಹುದೆಂದು ಬೆದರಿಕೆ ಹಾಕಿದ್ದರು ಎಂದು ವಿವರಿಸಿದರು.