ನವದೆಹಲಿ, ಮೇ.2(DaijiworldNews/AK): ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗುತ್ತಿದ್ದಂತೆಯೇ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಜರ್ಮನಿಗೆ ತೆರಳಿದ್ದು, ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯ ಕೇಂದ್ರವಾಗಿದೆ. ಪ್ರಜ್ವಲ್ ಅವರನ್ನ ವಿದೇಶಕ್ಕೆ ಹೋಗುವಂತೆ ಹೇಳಿದ್ಯಾರು? ವೀಸಾ ಇಲ್ಲದೇ ದಿಢೀರ್ ವಿದೇಶಕ್ಕೆ ಹೋಗಿದ್ದೇಗೆ? ಹೀಗೆ ಪ್ರಜ್ವಲ್ ವಿದೇಶಕ್ಕೆ ಹಾರಿರುವ ಹಿಂದಿನ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆ ಕಾಂಗ್ರೆಸ್, ದೇವೇಗೌಡ ಮತ್ತು ಕೇಂದ್ರ ಸರ್ಕಾರದ ಮೇ ಲೆ ಆರೋಪ ಮಾಡಿದೆ.
ಇದರ ಬೆನ್ನಲ್ಲೇ ವಿದೇಶಾಂಗ ಸಚಿವಾಲಯವು ಸ್ಪಷ್ಟನೆ ನೀಡಿದ್ದು, ವಿದೇಶಕ್ಕೆ ತೆರಳಲು ಸಚಿವಾಲಯದಿಂದ ಯಾವುದೇ ಅನುಮತಿ ಕೇಳಿರಲಿಲ್ಲ. ವಿದೇಶಾಂಗ ಇಲಾಖೆಯಿಂದ ಯಾವುದೇ ವೀಸಾ ನೋಟ್ ಕೂಡ ನೀಡಿಲ್ಲ. ಬದಲಾಗಿ ಅವರು ರಾಜತಾಂತ್ರಿಕ ಪಾಸ್ಪೋರ್ಟ್ ಮೂಲಕ ವಿದೇಶಕ್ಕೆ ಹೋಗಿದ್ದಾರೆ ಎಂದು ಸ್ಪಷ್ಟನೆ ನೀಡಿದೆ.
ದೆಹಲಿಯಲ್ಲಿಂದು ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಪ್ರಜ್ವಲ್ ರೇವಣ್ಣ ಜರ್ಮನಿಗೆ ತೆರಳಲು ನಾವು ಕೂಡ ಅನುಮತಿ ನೀಡಿಲ್ಲ. ವಿದೇಶಾಂಗ ಇಲಾಖೆಯಿಂದ ಯಾವುದೇ ವೀಸಾ ನೋಟ್ ಸಹ ಕೊಟ್ಟಿಲ್ಲ. ರಾಜತಾಂತ್ರಿಕ ಪಾಸ್ಪೋರ್ಟ್ ಹೊಂದಿರುವವರಿಗೆ ಯಾವುದೇ ವೀಸಾ ಅಗತ್ಯವಿಲ್ಲ. ಜರ್ಮನಿಗೆ ಪ್ರಯಾಣಿಸಲು ಸಚಿವಾಲಯವು ವೀಸಾ ಟಿಪ್ಪಣಿಯನ್ನೂ ನೀಡಿಲ್ಲ ಎಂದು ಹೇಳಿದ್ದರೆ. ಈ ಮೂಲಕ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ಪೋರ್ಟ್ ಮೂಲಕ ಜರ್ಮನಿಗೆ ಹಾರಿರುವುದು ಖಚಿತವಾಗಿದೆ. ಎಲ್ಲಾ ಗೊಂದಲಗಳಿಗೆ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ.