ರಾಯಚೂರು, ಮೇ.3(DaijiworldNews/AA): ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚಾಗುವ ಜೊತೆಗೆ ಕೆಲ ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚಾಗುತ್ತಿದೆ. ಅದರಂತೆ ರಾಯಚೂರಿನಲ್ಲಿ ಬಿಸಿಲು ಹೆಚ್ಚಾಗಿದ್ದು, ಅದಕ್ಕೆ ಕಾರಣ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ನಾಯಕ್ ಎಂದು ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ್ ನಾಯಕ್ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ರಾಯಚೂರಿನಲ್ಲಿ ತಾಪಮಾನ ಹೆಚ್ಚಳವಾಗಿರುವುದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ನಾಯಕ್ ಪಾತ್ರವಿದೆ. ಆರ್ ಟಿ ಪಿ ಎಸ್ ಹಾಗೂ ವೈಟಿಪಿಎಸ್, ಪವರ್ ಗ್ರಿಡ್ ನಿಂದ ನಮಗೆ ಶಾಖ ಹೆಚ್ಚಾಗಿದೆ. ಜಿಲ್ಲೆಗೆ ವೈಟಿಪಿಎಸ್ ತಂದವರು ಜಿ ಕುಮಾರ್ ನಾಯಕ್. ಇದು ಜಿ. ಕುಮಾರ್ ನಾಯಕ್ ಜನರಿಗೆ ಕೊಟ್ಟಂತ ಕಾಣಿಕೆ. ಕುಮಾರ್ ನಾಯಕ್ ಡಿಸಿ ಇದ್ದಾಗ, ಕೆಪಿಸಿಲ್ ಎಂ.ಡಿ ಆಗಿದ್ದಾಗ ಇವು ಬಂದಿವೆ. ಬೇರೆ ಜಿಲ್ಲೆ ಜನ ಪರಿಸರ ಕೆಡುತ್ತೆ ಅಂತ ತಿರಸ್ಕಾರ ಮಾಡಿದ್ದ ಪವರ್ ಗ್ರಿಡ್, ಶಾಖೊತ್ಪನ್ನ ಕೇಂದ್ರ ಜಿಲ್ಲೆಗೆ ಬಂದಿವೆ ಎಂದು ಕಿಡಿಕಾರಿದ್ದಾರೆ.
ಕಲ್ಲಿದ್ದಲು ಸುಟ್ಟು ವಿದ್ಯುತ್ ಉತ್ಪಾದನೆ ಮಾಡುತ್ತಿರುವುದರಿಂದ ಜಿಲ್ಲೆಯಲ್ಲಿ ತಾಪಮಾನ ಹೆಚ್ಚಾಗಿದೆ. ಇಷ್ಟು ಬಿಸಿಲು ಅನುಭವಿಸಲು ಜಿ. ಕುಮಾರ್ ನಾಯಕ್ ಕಾರಣ. ಜಿಲ್ಲೆಯಲ್ಲಿ ಪ್ರತಿನಿತ್ಯ 44 ರಿಂದ 46 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದು ಜನ ಹೈರಾಣಾಗಿದ್ದಾರೆ ಎಂದರು.