ಧಾರವಾಡ, ಮೇ.4(DaijiworldNews/AA): ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮಗಳು ಉಂಟಾಗುತ್ತಿದೆ ಎಂಬ ಬಗ್ಗೆ ಜನರು ಭಯಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರಿಗೆ ಲಸಿಕೆಯಿಂದ ಅಡ್ಡ ಪರಿಣಾಮವಾಗಿರುವ ಬಗ್ಗೆ ಮಾಹಿತಿ ಇದೆ. ಲಸಿಕೆ ಎಂದ ಮೇಲೆ ಸಣ್ಣ ಪ್ರಮಾಣದ ಅಡ್ಡ ಪರಿಣಾಮ ಇರುತ್ತೆ. ಆದರೆ ಜನರು ಏನೋ ಆಗಿಬಿಡುತ್ತೆ ಎಂದು ಭಯಪಡಬಾರದು ಎಂದರು.
ರಾಜ್ಯದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಬೆರಳೆಣಿಕೆಯಷ್ಟು ಜನರಲ್ಲಿ ಮಾತ್ರ ಗಂಭೀರ ಆರೋಗ್ಯ ಸಮಸ್ಯೆಗಳು ಕಂಡುಬಂದಿದೆ. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಪರಿಶೀಲನೆ ನಡೆಸಲಾಗಿದೆ. ನಾಲ್ಕೈದು ಜನರಿಗೆ ವ್ಯಾಕ್ಸಿನ್ ಪಡೆದ ಬಳಿಕ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಿರುವ ಬಗ್ಗೆ ಮಾಹಿತಿ ಇದೆ. ಆದರೆ ಇದು ಲಸಿಕೆಯಿಂದಲೇ ಆಗಿದೆಯೇ ಅಥವಾ ಬೇರೆ ಆರೋಗ್ಯದ ಸಮಸ್ಯೆಗಳು ಕೂಡ ಕಾರಣವೇ ಎಂದು ತನಿಖೆ ನಡೆಸಬೇಕು ಎಂದು ಹೇಳಿದರು.