ಬೆಂಗಳೂರು, ಮೇ.6(DaijiworldNews/AK): ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಪನ್ಡ್ರೈವ್ ಪ್ರಕರಣದ ರಾಜ್ಯ ರಾಜಕಾರಣದಲ್ಲೇ ಸಂಚಾಲವನ್ನು ಎಬ್ಬಿಸಿದೆ.ಆದ್ರೆ ಆಶ್ಲೀಲ ವಿಡಿಯೋಗಳನ್ನು ಮೊದಲು ಯಾರು ಬಿಡುಗಡೆ ಮಾಡಿದ್ದು ಎನ್ನುವುದೇ ನಿಗೂಢವಾಗಿದೆ. ಇದರ ಬೆನ್ನಲ್ಲೇ ಇದೀಗ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದು, ಈ ಪ್ರಕರಣದ ಸೂತ್ರಧಾರಿ ಡಿಕೆ ಶಿವಕುಮಾರ್ ಎಂದು ನೇರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೇವರಾಜೇಗೌಡ, ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ತಮ್ಮನ್ನು ಭೇಟಿಯಾಗಿದ್ದು ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ತಮಗೆ ಆಮಿಷವೊಡ್ಡಿದ ಸಂಭಾಷಣೆಯ ಆಡಿಯೋವನ್ನು ದೇವರಾಜೇಗೌಡ ಬಿಡುಗಡೆ ಮಾಡಿದ್ದಾರೆ. ಹಾಗೇ ಸಿಐಟಿ ತಂಡದ ಮೇಲೂ ಸಹ ಗಂಭೀರ ಆರೋಪಗಳನ್ನು ಮಾಡಿರುವ ದೇವರಾಜೇಗೌಡ, ಈ ಬಗ್ಗೆ ಸಿಬಿಐ ದೂರು ನೀಡಲು ಮುಂದಾಗಿದ್ದಾರೆ.
ರಾಜ್ಯ ಸರ್ಕಾರ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ಗೌಪ್ಯ ಸಭೆ ಮಾಡಲಾಗುತ್ತಿದೆ. ಗೌಪ್ಯ ಸಭೆ ನಡೆಸಿ ಯಾರು ಯಾರನ್ನ ಆರೋಪಿಗಳನ್ನ ಮಾಡಬೇಕು ಎನ್ನುವುದನ್ನು ಸೂಚನೆ ಕೊಟ್ಟಿದ್ದಾರೆ. ನನ್ನ ಜೀವನದ ಹೋರಾಟ ಇದ್ದಿದ್ದು ಹಾಸನ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳ ವಿರುದ್ಧವಾಗಿದೆ. ಅದನ್ನೇ ಅಸ್ತ್ರವಾಗಿ ಇಟ್ಟುಕೊಂಡು ಕೆಲ ಕಿಡಿಗೇಡಿ ರಾಜಕಾರಣಿಗಳು ವಾಮ ಮಾರ್ಗದಲ್ಲಿ ಹೋಗಲು ಮುಂದಾಗಿದ್ದಾರೆ ಎಂದು ಹೇಳಿದರು.
ಒಬ್ಬ ಕೊಲೆಗಾರ ವಕೀಲನ ಹತ್ರ ಬಂದಾಗ, ನಮ್ಮ ವಕೀಲ ವೃತ್ತಿಯಲ್ಲಿ ಏನು ಮಾಡಬೇಕು ಅದನ್ನ ಮಾಡಿದ್ದೇನೆ. ಕಾರು ಚಾಲಕ ಕಾರ್ತಿಕ್ ನನ್ನ ಕಚೇರಿಗೆ ಬಂದು, ಒಂದು ಪೆನ್ ಡ್ರೈವ್ ಹಾಗೂ ಕೆಲ ಡಾಕ್ಯುಮೆಂಟ್ ಕೊಡುತ್ತಾರೆ. ಅಶ್ಲೀಲ ವಿಡಿಯೋ ಕ್ಲೀಪ್ ಹಾಗೂ ಪತ್ರಿಕೆ ಪೇಪರ್ ಅನ್ನ ನಮ್ಮ ವಕೀಲರಿಗೆ ತಂದು ಕೊಡುತ್ತಾರೆ. ಇದಕ್ಕೆ ಪೂರಕವಾದ ಕೆಲ ಡಾಕ್ಯುಮೆಂಟ್ ಕೊಡಿ ಎಂದು ಕೇಳಿದ್ದೇನೆ. ಕಾರ್ತಿಕ್ ನನ್ನ ಮನೆಗೆ ಯಾವಾಗ ಬಂದ? ನನ್ನ ಮನೆಯಲ್ಲಿ ಕುಳಿತು ಮಾತನಾಡಿರುವ ವಿಡಿಯೋ ಸಿಬಿಐಗೆ ಕೊಡುತ್ತಿದ್ದೇನೆ ಎಂದು ವಕೀಲ ದೇವರಾಜೇಗೌಡ ವಿಡಿಯೋ ಪ್ರದರ್ಶನ ಮಾಡಿದರು.
ಪೆನ್ ಡ್ರೈವ್ ಕಥಾನಾಯಕ ಕಾಂಗ್ರೆಸ್ ಸರ್ಕಾರವಾಗಿದೆ. ಇದರ ರೂವಾರಿ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಿದ್ದಾರೆ ಎಂದು ಆರೋಪಿಸಿದ್ದಾರೆ.ಪೆನ್ಡ್ರೈವ್ ವಿಚಾರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಬೆಂಬಲಿಗರ ಮೂಲಕ ನನಗೆ ದೊಡ್ಡ ಮಟ್ಟದಲ್ಲಿ ಆಫರ್ ಕೊಟ್ಟಿದ್ದರು. ಕ್ಯಾಬಿನೆಟ್ ಮಟ್ಟದ ಹುದ್ದೆ ಕೊಡುವುದಾಗಿ ಆಫರ್ ಕೊಟ್ಟಿದ್ದರು ಎಂದು ಬಹಿರಂಗಪಡಿಸಿದರು.
ಇದೇ ವೇಳೆ ಎಸ್ಐಟಿ ತನಿಖೆ ಮೇಲೆ ನನಗೆ ನಂಬಿಕೆ ಇಲ್ಲ. ಇದರ ತನಿಖೆಯನ್ನು ಸಿಬಿಐಗೆ ಕೊಟ್ಟರೆ, ನಾನು ಸಂಪೂರ್ಣ ಆಡಿಯೋ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.