ಹುಬ್ಬಳ್ಳಿ, ಮೇ.7(DaijiworldNews/AA): ಅಶ್ಲೀಲ ವಿಡಿಯೋ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಪರ ಸಹಾನುಭೂತಿ ಹೊಂದುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯ ವಿವೇಕಾನಂದ ಕಾಲೋನಿಯಲ್ಲಿರುವ ಚಿನ್ಮಯ ವಿದ್ಯಾಲಯದ ಮತದಾನ ಕೇಂದ್ರದಲ್ಲಿ ಮತಚಲಾಯಿಸಿದ ಬಳಿಕ ಮಾತನಾಡಿದ ಅವರು, ನಮಗೆ ಮಹಿಳೆಯರ ಬಗ್ಗೆ ಹೆಚ್ಚು ಕಾಳಜಿ ಇದೆ. ಮಹಿಳೆಯರಿಗೆ ಆಗಿರುವ ಅನ್ಯಾಯದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಅವರ ಪಾತ್ರದ ಮೇಲಿನ ಆರೋಪವನ್ನು ಎಸ್ಐಟಿ ತನಿಖೆ ಮಾಡಬೇಕು. ಸಮಗ್ರ ತನಿಖೆಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಉತ್ತಮ. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಸಿಬಿಐಗೆ ವಹಿಸಲು ಹೆದರುತ್ತಿದೆ ಎಂದರು.
ಇನ್ನು ಕಾಂಗ್ರೆಸ್ ಸರ್ಕಾರ ಈ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದೆ. ಮತದಾನ ಮುಗಿಯುವವರೆಗೆ ಕಾಯುವ ಬದಲು ಸ್ವಯಂ ಪ್ರೇರಿತ ಎಫ್ಐಆರ್ ಮೊದಲೇ ಏಕೆ ದಾಖಲಿಸಲಿಲ್ಲ? ಈ ಸರ್ಕಾರ ಪ್ರಜ್ವಲ್ ಅವರನ್ನು ಬಂಧಿಸುವ ಬದಲು ವಿದೇಶಕ್ಕೆ ಹೋಗಲು ಅವಕಾಶ ಮಾಡಿಕೊಟ್ಟಿದೆ. ಹಲವು ವೀಡಿಯೊಗಳು ಹಳೆಯವು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮೂಲಕ ಪ್ರಜ್ವಲ್ ರನ್ನು ಸಂಸದರನ್ನಾಗಿಸಿದಾಗ ಮತ್ತು ರೇವಣ್ಣರನ್ನು ಸಚಿವರನ್ನಾಗಿಸಿದಾಗ ಕಾಂಗ್ರೆಸ್ಗೆ ಇದರ ಅರಿವಿರಲಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.