ಬೆಂಗಳೂರು, ಮೇ.8(DaijiworldNews/AK): ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ವಿಚಾರಣೆಗೆ ಕೇಳಿದ್ದ ಕಾಲಾವಕಾಶ ಇಂದಿಗೆ ಮುಕ್ತಾಯವಾಗಿದೆ. ವಿದೇಶದಲ್ಲಿರುವ ಪ್ರಜ್ವಲ್ ಭಾರತಕ್ಕೆ ಆಗಮಿಸುವ ಸಾಧ್ಯತೆ ಹಿನ್ನೆಲೆ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಎಸ್ಐಟಿಅಧಿಕಾರಿಗಳು ಅಲರ್ಟ್ ಆಗಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಪ್ರಜ್ವಲ್ ವಿದೇಶಕ್ಕೆ ಹಾರಿದ್ದರು. ಪ್ರಕರಣ ತನಿಖೆಯನ್ನು ಎಸ್ಐಟಿಗೆ ವಹಿಸಿದ ಬಳಿಕ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ತಾನು ವಿದೇಶದಲ್ಲಿದ್ದು, ವಿಚಾರಣೆಗೆ ಹಾಜರಾಗಲು ಒಂದು ವಾರ ಕಾಲಾವಕಾಶ ಬೇಕು ಎಂದು ಪ್ರಜ್ವಲ್ ಪತ್ರ ಬರೆದಿದ್ದರು.
ತನ್ನ ವಕೀಲರ ಮೂಲಕ ಎಸ್ಐಟಿ ಅಧಿಕಾರಿಗಳಿಗೆ ಪ್ರಜ್ವಲ್ ಉತ್ತರ ಬರೆದಿದ್ದರು. ಅದಾದ ನಂತರವೂ ಸತತವಾಗಿ ಮೂರು ಬಾರಿ ಎಸ್ಐಟಿ ನೋಟಿಸ್ ನೀಡಿತ್ತು. ಮೂರು ನೋಟಿಸ್ ನೀಡಿ, ನಾಲ್ಕನೇ ಬಾರಿಗೆ ಬ್ಲೂ ಕಾರ್ನರ್ ನೋಟಿಸ್ ನೀಡಲಾಗಿದೆ.
. ಕಳೆದ ಮೂರು ದಿನಗಳಿಂದ ದೇಶದ ಎಲ್ಲಾ ಏರ್ಪೋರ್ಟ್ಗಳ ಮೇಲೆ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ.ಒಂದು ವಾರಗಳ ಕಾಲದ ಅವಧಿ ಹಾಗೂ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದ ಹಿನ್ನೆಲೆ ಆರೋಪಿ ಪ್ರಜ್ವಲ್ ರೇವಣ್ಣ ಭಾರತಕ್ಕೆ ಮರಳುವ ಸಾಧ್ಯತೆ ಇದೆ. ಈ ಹಿನ್ನಲೆ ವಿಮಾನ ನಿಲ್ದಾಣಗಳಲ್ಲಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.