ಬೆಂಗಳೂರು, ಮೇ 9 (DaijiworldNews/AK): ಕಾಂಗ್ರೆಸ್ ಪಕ್ಷವು ಸ್ಯಾಮ್ ಪಿತ್ರೋಡಾ ರಾಜೀನಾಮೆ ಪಡೆದು ಅವರ ಹೇಳಿಕೆಗೆ ಸಮ್ಮತಿ ಸೂಚಿಸಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ದೇಶದ ಜನರು ಅವಮಾನ ಪಡುವಂಥ ಘಟನೆ ಕಾಂಗ್ರೆಸ್ ಪಕ್ಷದಿಂದ, ಕಾಂಗ್ರೆಸ್ಸಿನ ಅಂತರಾಷ್ಟ್ರೀಯ ಅಧ್ಯಕ್ಷ ಸ್ಯಾಮ್ ಪಿತ್ರೋಡರಿಂದ ಆಗಿದೆ. ಸ್ಯಾಮ್ ಪಿತ್ರೋಡ ಅವರು ಕಾಂಗ್ರೆಸ್ ಪಾಲಿಗೆ ತಿಥಿ ಗಿರಾಕಿ. ದೇಶವನ್ನು ಒಡೆಯುವ, ಛಿದ್ರ ಛಿದ್ರ ಮಾಡುವ, ದೇಶದ ಜನರಲ್ಲಿ ಬಿರುಕು ತರುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂದು ಟೀಕಿಸಿದರು.
ದೇಶ ಒಡೆಯುವ ಹೇಳಿಕೆ ನೀಡಿದ್ದ ಡಿ.ಕೆ.ಸುರೇಶ್ ಅವರು ಇದಕ್ಕೆ ಹಿನ್ನೆಲೆ ಗಾಯಕರಾಗಿದ್ದರು. ಈಗ ಮುನ್ನೆಲೆ ಗಾಯಕ, ಕಾಂಗ್ರೆಸ್ ಭಾಗ್ಯಗಳ ತಜ್ಞ ಸ್ಯಾಮ್ ಪಿತ್ರೋಡ ಅವರು ಬಣ್ಣದ ಗ್ಯಾರಂಟಿ ಕೊಡುತ್ತಿದ್ದಾರೆ. ಹಿಂದೆ ವರ್ಣಭೇದ ನೀತಿ ವಿರುದ್ಧ ದೊಡ್ಡ ಹೋರಾಟ ನಡೆದಿತ್ತು. ಸಾವಿರಾರು ಜನರೂ ಮೃತಪಟ್ಟಿದ್ದರು ಎಂದು ವಿವರಿಸಿದರು.
ವ್ಯಕ್ತಿಗಳ ಬಣ್ಣದ ಮೇಲೆ ಯೋಗ್ಯತೆ ಅಳೆಯುವುದು ಕಾಂಗ್ರೆಸ್ ಡಿಎನ್ಎಯಲ್ಲೇ ಇದೆ ಎಂದು ಟೀಕಿಸಿದ ಅವರು, ಈ ಚಿಂತನೆ ಇದೀಗ ಜಗಜ್ಜಾಹೀರಾಗಿದೆ. ಇದೇ ಜನರು ಮಹಾತ್ಮ ಗಾಂಧಿಯವರು ಕಪ್ಪು ಬಣ್ಣದವರು ಎಂದು ಅವರನ್ನು ರೈಲಿನಿಂದ ಹೊರಕ್ಕೆ ಹಾಕಿದ್ದರು ಎಂದು ನೆನಪಿಸಿದರು. ಸ್ಯಾಮ್ ಪಿತ್ರೋಡ ಒಬ್ಬ 420 (ವಂಚಕ). ಅವರು ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆ ಕೊಟ್ಟ ತಕ್ಷಣ ಈ ಸಮಸ್ಯೆ ಬಗೆಹರಿಯುವುದಿಲ್ಲ ಎಂದರು.
ನಾವು ಭಾರತೀಯರು ಹೌದೇ ಅಲ್ಲವೇ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ. ದಕ್ಷಿಣ ಭಾರತದವರೆಲ್ಲ ಆಫ್ರಿಕದವರು ಎಂದಿದ್ದಾರೆ. ನಮಗೆ 5 ಸಾವಿರ ವರ್ಷಗಳ ಇತಿಹಾಸ ಇದೆ. ರಾಮಾಯಣ, ಮಹಾಭಾರತ ನಡೆದ ದೇಶ- ಸಂಸ್ಕøತಿ ನಮ್ಮದು. ಪಿತ್ರೋಡ ನಮ್ಮನ್ನು ಒಮ್ಮಿಂದೊಮ್ಮೆಲೆ ಆಫ್ರಿಕದ ಕಾಡುಗಳಲ್ಲಿ ಬಿಟ್ಟಂತಾಗಿದೆ. ಕಾಂಗ್ರೆಸ್ಸಿನವರು ಇಲ್ಲಿನ ಒಕ್ಕಲಿಗರು, ಲಿಂಗಾಯತರು, ದಲಿತರು, ಹಿಂದುಳಿದ ವರ್ಗದವರು- ಇವರಿಗೆ ಯಾವ್ಯಾವ ಬಣ್ಣ ಹಚ್ಚುತ್ತಾರೆ ಎಂದು ಪ್ರಶ್ನಿಸಿದರು.