ಬೆಂಗಳೂರು, ಮೇ 9 (DaijiworldNews/ AK): 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ಇಂದು(ಮೇ 09) ಪ್ರಕಟವಾಗಿದೆ. ಇದರ ಬೆನ್ನಲ್ಲೇ ಇದೀಗ ಅನುತ್ತೀರ್ಣರಾದವರಿಗೆ ಎಸ್ಎಸ್ಎಲ್ಸಿ ಪರೀಕ್ಷೆ -2ರ ವೇಳಾಪಟ್ಟಿ ಬಿಡುಗಡೆಯಾಗಿದೆ.
ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಚಿಂತೆ ಮಾಡಬೇಡಿ. ಯಾಕೆಂದರೆ ಇನ್ನೂ ಉತ್ತಮ ಅಂಕಗಳನ್ನು ಗಳಿಸಲು ಪರೀಕ್ಷಾ ಮಂಡಳಿ ಅವಕಾಶ ಕಲ್ಪಿಸಿದೆ. ಎಸ್ಎಸ್ಎಲ್ಸಿ ಪರೀಕ್ಷೆ-2ರ ದಿನಾಂಕ ನಿಗದಿಯಾಗಿದ್ದು, ವೇಳಾಪಟ್ಟಿ (SSLC 2 Exam Time Table) ಪ್ರಕಟಿಸಿದ್ದು, ಜೂನ್ 7ರಿಂದ 14ರವರೆಗೆ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರವರೆಗೆ ಪರೀಕ್ಷೆಗಳು ನಡೆಯಲಿವೆ. ಇನ್ನೂ ಪ್ರತಿ ವಿಷಯಕ್ಕೂ ಪ್ರಶ್ನೆಪತ್ರಿಕೆ ಓದಲು 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
ಎಸ್ಎಸ್ಎಲ್ಸಿ ಪರೀಕ್ಷೆ -2ರ ವೇಳಾಪಟ್ಟಿ ಹೀಗಿದೆ:
7-6-2024- ಪ್ರಥಮ ಭಾಷೆ
8-6-2024- ತೃತೀಯ ಭಾಷೆ
10-6-2024- ಗಣಿತ, ಸಮಾಜ ಶಾಸ್ತ್ರ
11-6-2024- ಅರ್ಥ ಶಾಸ್ತ್ರ, ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್
12-6-2024- ವಿಜ್ಞಾನ ಹಾಗೂ ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ
13-6-2024- ದ್ವಿತೀಯ ಭಾಷೆ (ಇಂಗ್ಲೀಷ್ ಹಾಗೂ ಕನ್ನಡ)
14-6-2024 – ಸಮಾಜ ವಿಜ್ಞಾನ
ಪರೀಕ್ಷೆ ಸೂಚನೆಗಳು:
ಜೂನ್ 15ರಂದು ಜೆಟಿಎಸ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಹಾಗೂ ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ನಡೆಸಲಾಗುವುದು. ಸಬ್ಜೆಕ್ಟ್ ಕೋಡ್ 15 ಮತ್ತು 60ರ ವಿಷಯಗಳು ಆದರ್ಶ ವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತವೆ. ಹಿಂದೂಸ್ತಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ ವಿಷಯದ ಪರೀಕ್ಷೆಯನ್ನು ಮಧ್ಯಾಹ್ನ 2 ಗಂಟೆಯಿಂದ ಸಾಯಂಕಾಲ 5.15 ರವರೆಗೆ ನಿಗದಿಪಡಿಸಿದೆ. ಸದರಿ ವಿಷಯಗಳ ತಾತ್ವಿಕ ಪರೀಕ್ಷೆಯನ್ನು ಮಧ್ಯಾಹ್ನ 2.00 ಗಂಟೆಯಿಂದ ಮಧ್ಯಾಹ್ನ 3.45 ಗಂಟೆಯವರೆಗೆ ಮತ್ತು ಪ್ರಾಯೋಗಿಕ ಪರೀಕ್ಷೆಯನ್ನು ಮಧ್ಯಾಹ್ನ 3.45 ರಿಂದ ಸಾಯಂಕಾಲ 5.15 ಗಂಟೆಯವರೆಗೆ ನಡೆಸಲಾಗುವುದು.