ಬೆಂಗಳೂರು, ಮೇ 9 (DaijiworldNews/AK): ಭಾರೀ ಸಂಚಾಲ ಸೃಷ್ಟಿಸಿದ ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ಈಗ ಹೊಸ ತಿರುವು ಪಡೆದಿದೆ. ಪೊಲೀಸರೆಂದು ಹೇಳಿಕೊಂಡು ಬಂದಿರುವ ಮೂವರು ಸಂತ್ರಸ್ತೆಗೆ ಬೆದರಿಕೆ ಹಾಕಿರುವ ಆರೋಪವೊಂದು ಕೇಳಿಬಂದಿದೆ.
ಈ ಸಂಬಂಧ ಇಂದು ರಾಷ್ಟ್ರೀಯ ಮಹಿಳಾ ಆಯೋಗ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ. ಇದರಲ್ಲಿ ಬೆದರಿಕೆ ಹಾಕಿರುವ ಬಗ್ಗೆ ಸಂತ್ರಸ್ತೆ ಆಯೋಗಕ್ಕೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಿವಿಲ್ ಡ್ರೆಸ್ನಲ್ಲಿ ಪೊಲೀಸರು ಎಂದು ಹೇಳಿಕೊಂಡು ಬಂದ ಮೂವರು ಬೆದರಿಕೆ ಹಾಕಿದ್ದಾರೆ. ಪ್ರಜ್ವಲ್ ವಿರುದ್ಧ ಸುಳ್ಳು ದೂರು ಕೊಡುವಂತೆ ಒತ್ತಡ ಹೇರಿದ್ದಾರೆ. ಬೇರೆ, ಬೇರೆ ಫೋನ್ ನಂಬರ್ ಗಳಿಂದ ನಿರಂತರ ಕರೆ ಮಾಡಲಾಗಿದೆ. ಅಲ್ಲದೇ ದೂರವಾಣಿ ಮೂಲಕವು ಸಹ ಒತ್ತಡ ಹಾಕಲಾಗಿದೆ ಎಂದು ಸಂತ್ರಸ್ತೆ ದೂರಿರುವುದಾಗಿ ಮಹಿಳಾ ಆಯೋಗ ತಿಳಿಸಿದೆ.
ಪ್ರಜ್ವಲ್ ರೇವಣ್ಣ ಕೇಸ್ ಸಂಬಂಧ ತನಿಖೆ ಮಾಡಲಾಗುತ್ತಿದೆ. ಇದಕ್ಕೆ ವಿಶೇಷ ತನಿಖೆ ತಂಡವನ್ನು ಕೂಡ ರಚನೆ ಮಾಡಲಾಗಿದೆ. ಆದರೆ ಇತ್ತ ಪ್ರಜ್ವಲ್ ವಿರುದ್ಧ ಸುಳ್ಳು ದೂರು ನೀಡಲು ಮಹಿಳೆ ಮೇಲೆ ಒತ್ತಡ ಹಾಕಲಾಗಿದೆ ಎನ್ನುವ ಮೂಲಕ ಆಯೋಗ ಸ್ಫೋಟಕ ತಿರುವು ನೀಡಿದೆ.