ಬೆಂಗಳೂರು, ಮೇ.10(DaijiworldNews/AA): ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಂತ್ರಸ್ತರಿಗೆ ಬೆದರಿಕೆ ಹಾಕಿ ತನಿಖೆಯ ದಿಕ್ಕು ತಪ್ಪಿಸಿದ ಆರೋಪದ ಮೇಲೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಎಸ್ ಐಟಿಗೆ ಕಾಂಗ್ರೆಸ್ ಮುಖಂಡರು ದೂರು ನೀಡಿದ್ದಾರೆ.
ಕಾಂಗ್ರೆಸ್ ಮುಖಂಡರು ನೀಡಿರುವ ದೂರಿನಲ್ಲಿ ಹೆಚ್ ಡಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಾಜಿ ಸಚಿವ ಹೆಚ್ಡಿ ರೇವಣ್ಣ ಮತ್ತು ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಹಲವು ಮಹಿಳೆಯರು ಸಂತ್ರಸ್ತೆಯರಾಗಿದ್ದಾರೆ. ಈ ಪ್ರಕರಣಗಳ ತನಿಖೆಗೆ ಸರ್ಕಾರ ಎಸ್ಐಟಿ ರಚಿಸಿದೆ. ಹೀಗಿರುವಾಗ, ಕುಮಾರಸ್ವಾಮಿ ಸಂತ್ರಸ್ತೆಯರ ಸ್ಥಳವನ್ನು ಬಹಿರಂಗಪಡಿಸುತ್ತಿದ್ದಾರೆ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಜನರನ್ನು ಪರೋಕ್ಷವಾಗಿ ರಕ್ಷಿಸುತ್ತಿದ್ದಾರೆ. ಇದರಿಂದಾಗಿ ಸಂತ್ರಸ್ತೆಯರು ದೂರು ನೀಡಲು ಮುಂದೆ ಬರುತ್ತಿಲ್ಲ ಎಂದು ದೂರಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ವಿವರ ಕುಮಾರಸ್ವಾಮಿಯವರ ಬಳಿ ಇವೆ. ಹೀಗಾಗಿ ಅವರನ್ನು ವಿಚಾರಣೆಗೆ ಒಳಪಡಿಸಬೇಕು. ಬಿಜೆಪಿ ಮುಖಂಡ ದೇವರಾಜೇಗೌಡ ಅವರು ತಮ್ಮ ಪಕ್ಷದ ನಾಯಕರಿಗೆ ವಿವರಗಳನ್ನು ರವಾನಿಸಿದ್ದಾರೆ. ಆದರೆ, ಅವರು ಪೊಲೀಸರನ್ನು ಏಕೆ ಸಂಪರ್ಕಿಸಲಿಲ್ಲ? ಗೌಡ ಅವರು ವಕೀಲರಾಗಿದ್ದು, ಅವರು ಕರ್ನಾಟಕ ಮಹಿಳಾ ಆಯೋಗವನ್ನೂ ಸಂಪರ್ಕಿಸಬಹುದಿತ್ತು. ನಾಯಕರು, ನಿಜವಾಗಿ ಶಾಮೀಲಾಗಿರುವವರ ವಿರುದ್ಧ ಅವರ ಹೋರಾಟ ಅಲ್ಲ. ಇಬ್ಬರೂ ಸಂತ್ರಸ್ತ ಮಹಿಳೆಯರಿಗಾಗಿ ಧ್ವನಿ ಎತ್ತುತ್ತಿಲ್ಲ, ಆದರೆ ಪೆನ್ ಡ್ರೈವ್ ಅನ್ನು ಪ್ರಸಾರ ಮಾಡುವವರತ್ತ ಗಮನ ಹರಿಸುವ ಮೂಲಕ ತನಿಖೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.