ಮಹಾರಾಷ್ಟ್ರ ಮೇ 13 (DaijiworldNews/AK): ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಸೋಮವಾರ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಮಾವೋವಾದಿಗಳು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಪಿನ ಕೆಲವು ಸದಸ್ಯರು ವಿಧ್ವಂಸಕ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಭಮ್ರಗಡ ತಾಲೂಕಿನ ಕಟ್ರಂಗಟ್ಟ ಗ್ರಾಮದ ಬಳಿಯ ಅರಣ್ಯದಲ್ಲಿ ಮೊಕ್ಕಾಂ ಹೂಡಿದ್ದಾರೆಎಂದು ಪೊಲೀಸ್ ವರಿಷ್ಠಾಧಿಕಾರಿ ನೀಲೋತ್ಪಾಲ್ ತಿಳಿಸಿದ್ದಾರೆ.ಗಡ್ಚಿರೋಲಿ ಪೊಲೀಸರ ವಿಶೇಷ ಯುದ್ಧ ವಿಭಾಗವಾದ ಸಿ-60 ಕಮಾಂಡೋಗಳ ಎರಡು ತುಕಡಿಗಳನ್ನು ತಕ್ಷಣವೇ ಈ ಪ್ರದೇಶದಲ್ಲಿ ಶೋಧಕ್ಕಾಗಿ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಮಾವೋವಾದಿಗಳು ಮನಬಂದಂತೆ ಗುಂಡು ಹಾರಿಸಿದರು, ಇದಕ್ಕೆ ಸಿ-60 ಸಿಬ್ಬಂದಿ ಪ್ರತಿದಾಳಿ ನಡೆಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಗುಂಡಿನ ದಾಳಿ ನಿಲ್ಲಿಸಿದ ಬಳಿಕ ಸ್ಥಳದಿಂದ ಓರ್ವ ಪುರುಷ ಮತ್ತು ಇಬ್ಬರು ಮಹಿಳಾ ಮಾವೋವಾದಿಗಳ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.ಅವರಲ್ಲಿ ಒಬ್ಬನನ್ನು ಪೆರಿಮಿಲಿ ದಳದ ಉಸ್ತುವಾರಿ ಮತ್ತು ಕಮಾಂಡರ್ ವಾಸು ಎಂದು ಗುರುತಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.