ನವದೆಹಲಿ, ಮೇ 13 (DaijiworldNews/ Ak): ಮಧ್ಯಂತರ ಜಾಮೀನು ನೀಡುವಂತೆ ಕೋರಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾದ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಅರವಿಂದ್ ಕೇಜ್ರಿವಾಲ್ಗೆ ಚುನಾವಣಾ ಪ್ರಚಾರಕ್ಕೆ ಹೇಗೆ ಮಧ್ಯಂತರ ಜಾಮೀನು ನೀಡಿರುವ ರೀತಿಯಲ್ಲಿ ತನಗೂ ಜಾಮೀನು ನೀಡಬೇಕೆಂದು ಕೋರಿ ಹೇಮಂತ್ ಸೊರೇನ್ ಅರ್ಜಿ ಸಲ್ಲಿಸಿದ್ದರು.
ಅರವಿಂದ್ ಕೇಜ್ರಿವಾಲ್ಗೆ ಜಾಮೀನು ನೀಡಿದ್ದ ನ್ಯಾ. ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತಾ ಅವರಿದ್ದ ದ್ವಿಸದಸ್ಯ ಪೀಠದ ಬಳಿ ತನ್ನ ಕಕ್ಷಿದಾರರಿಗೆ ಜಾಮೀನು ನೀಡಬೇಕು. ಅವರಿಗೂ ಚುನಾವಣಾ ಪ್ರಚಾರ ನಡೆಸಲು ಅನುಮತಿ ನೀಡಬೇಕು. ಹೀಗಾಗಿ ಮೇ 17 ರಂದು ತುರ್ತು ಅರ್ಜಿ ವಿಚಾರಣೆ ನಡೆಸಿ ಎಂದು ವಕೀಲ ಕಪಿಲ್ ಸಿಬಲ್ ಮನವಿ ಮಾಡಿದರು.
ಕೋರ್ಟ್ ಈ ಅರ್ಜಿಯ ವಿಚಾರಣೆಯನ್ನು ಮೇ 20 ರಂದು ವಿಚಾರಣೆ ನಡೆಸುವುದಾಗಿ ತಿಳಿಸಿತು. ಅರ್ಜಿಯ ವಿಚಾರಣೆಗೆ ಇಡಿ ಪ್ರತಿಕ್ರಿಯೆ ನೀಡಲು 7 ದಿನ ಸಮಯ ನೀಡಬೇಕು ಎಂದು ಪೀಠ ಹೇಳಿತು. ಇದಕ್ಕೆ ಸಿಬಲ್, ಚುನಾವಣೆ ಮೇ 20 ರಂದು ಮುಕ್ತಾಯವಾಗುತ್ತದೆ. ಇಲ್ಲಿಯವರೆಗೆ ನಾನು ಈ ರೀತಿಯ ಮನವಿ ಸಲ್ಲಿಸಿಲ್ಲ. ಒಂದು ವೇಳೆ ಮೇ 17 ರಂದು ಅರ್ಜಿ ವಿಚಾರಣೆ ನಡೆಸದೇ ಇದ್ದರೆ ನಮಗೆ ದೊಡ್ಡ ಅನ್ಯಾಯವಾಗುತ್ತದೆ ಎಂದು ಹೇಳಿದರು.
ಮೇ 20 ರಂದು ಚುನಾವಣೆ ನಡೆಯಲಿರುವ ಕಾರಣ 48 ಗಂಟೆಯ ಮೊದಲು ಬಹಿರಂಗ ಪ್ರಚಾರ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಜಾಮೀನು ಮಂಜೂರು ಮಾಡಿದರೆ ನಿಮ್ಮ ಕಕ್ಷಿದಾರರಿಗೆ ಹೇಗೆ ಲಾಭವಾಗುತ್ತದೆ ಎಂದು ಕೋರ್ಟ್ ಪ್ರಶ್ನೆ ಮಾಡಿತು.ಈ ವೇಳೆ ಚುನಾವಣೆಯಲ್ಲಿ ಭಾಗವಹಿಸಲು ಈ ಅರ್ಜಿ ಸಲ್ಲಿಸಿದ್ದೇವೆ. ಮೇ 20ಕ್ಕೆ ಚುನಾವಣೆ ನಡೆಯಲಿದೆ. ಒಂದು ವೇಳೆ ಅನುಮತಿ ಸಿಗದೇ ಇದ್ದರೆ ಅರ್ಜಿಯನ್ನು ವಜಾಗೊಳಿಸಿ ಎಂದು ಮನವಿ ಮಾಡಿದರು.