ಮುಂಬೈ, ಮೇ. 14(DaijiworldNews/AA): ಅನಧಿಕೃತ ಜಾಹೀರಾತು ಫಲಕವೊಂದು ಪೆಟ್ರೋಲ್ ಪಂಪ್ ಮೇಲೆ ಬಿದ್ದ ಪರಿಣಾಮ 14 ಮಂದಿ ಸಾವನ್ನಪ್ಪಿದ ಘಟನೆ ಮುಂಬೈನ ಘಾಟ್ಕೋಪರ್ನಲ್ಲಿ ಸೋಮವಾರ ನಡೆದಿದೆ. ಈ ಅವಘಡದಲ್ಲಿ 74 ಮಂದಿ ಗಾಯಗೊಂಡಿದ್ದಾರೆ.
ಪೆಟ್ರೋಲ್ ಪಂಪ್ ಎದುರು ಬೃಹತ್ ಜಾಹೀರಾತು ಫಲಕವನ್ನು ನಿಲ್ಲಿಸಲಾಗಿತ್ತು. ಬಿರುಗಾಳಿ ಸಹಿತ ಮಳೆಯಿಂದಾಗಿ ಈ ಬೃಹತ್ ಜಾಹೀರಾತು ಫಲಕ ಕುಸಿದು ಬಿದ್ದಿದೆ. ಕಬ್ಬಿಣದ ಬಿಲ್ ಬೋರ್ಡ್ ಪೆಟ್ರೋಲ್ ಪಂಪ್ ಸಮೀಪ ನಿಂತಿದ್ದ ಕಾರುಗಳ ಮೇಲೆ ಬಿದ್ದಿದೆ. ಪರಿಣಾಮ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳಲ್ಲಿ 35 ಮಂದಿ ಬಿಡುಗಡೆಗೊಂಡಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಪರಿಹಾರ ಕಾರ್ಯಾಚರಣೆ ಇಂದು ಬೆಳಿಗ್ಗೆಯೂ ಮುಂದುವರೆದಿತ್ತು ಎಂದು ತಿಳಿದುಬಂದಿದೆ.
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದು, ಸಾವನ್ನಪ್ಪಿದವರ ಕುಟುಂಬದ ಸದಸ್ಯಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಜೊತೆಗೆ ಮುಂಬೈನಲ್ಲಿರುವ ಎಲ್ಲಾ ಹೋಡಿರ್ಂಗ್ಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.