ಬೆಂಗಳೂರು, ಮೇ. 14(DaijiworldNews/AA): ಕಳೆದ ಎರಡು ವರ್ಷಗಳಿಂದ 5, 8 ಮತ್ತು 9ನೇ ತರಗತಿ ಮಕ್ಕಳಿಗೆ ಸರ್ಕಾರ ನಡೆಸಿದ ಬೋರ್ಡ್ ಪರೀಕ್ಷೆಗೆ ಎಷ್ಟು ಮಕ್ಕಳು ಹಾಜರಾದರು? ಎಷ್ಟು ಪ್ರಶ್ನೆ ಪತ್ರಿಕೆ ಮುದ್ರಿಸಲಾಗಿದೆ? ಎಷ್ಟು ವೆಚ್ಚವಾಗಿದೆ? ಈ ಯಾವ ಪ್ರಶ್ನೆಗಳಿಗೂ ಉತ್ತರಿಸಲು ಸಾಧ್ಯವಿಲ್ಲ. ಈಎಲ್ಲಾ ಮಾಹಿತಿ ಗೌಪ್ಯವಂತೆ.
ಸರ್ಕಾರ 2022-23 ನೇ ಸಾಲಿನಲ್ಲಿ 5 ಮತ್ತು 8ನೇ ತರಗತಿಗಳಿಗೆ 2023-24ನೇ ಸಾಲಿನಿಂದ 5, 8 ಮಾತ್ರವಲ್ಲದೆ 9 ಮತ್ತು 11 ನೇ ತರಗತಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮೂಲಕ ಮೌಲ್ಯಾಂಕನ ಪರೀಕ್ಷೆ ನಡೆಸುತ್ತಿದೆ. ಈ ತರಗತಿಗಳ ಬೋರ್ಡ್ ಪರೀಕ್ಷೆಗೆ ಎರಡೂ ಸಾಲಿನಲ್ಲಿ ಎಷ್ಟು ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದರು? ತರಗತಿವಾರು ಪ್ರಶ್ನೆ ಪತ್ರಿಕೆಗಳ ಮುದ್ರಣ ಸಂಖ್ಯೆ ಎಷ್ಟು? ಈ ಪರೀಕ್ಷೆಗಳ ಮುದ್ರಣಕ್ಕೆ ತಗುಲಿದ ವೆಚ್ಚ ಎಷ್ಟು? ಪರೀಕ್ಷೆಗೆ ಎಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು? ಈ ಎಲ್ಲಾ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲೂ ನೀಡಲು ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆಯ ಗೌಪ್ಯತೆ ಹೆಸರಿನಲ್ಲಿ ನಿರಾಕರಿಸಿದೆ.
ಖಾಸಗಿ ಪ್ರಮುಖ ಶಾಲಾ ಸಂಘಟನೆಯಾದ 'ಅವರ್ ಸ್ಕೂಲ್ಸ್' ಮಾಹಿತಿ ಹಕ್ಕು ಕಾಯ್ದೆಯಡಿ (ಆರ್ ಟಿಐ) ಶಿಕ್ಷಣ ಇಲಾಖೆಯಡಿ ಬರುವ ಕೆಎಸ್ ಕ್ಯುಎಎಸಿಗೆ ಈ ಮೂರೂ ತರಗತಿ ಬೋರ್ಡ್ ಪರೀಕ್ಷೆಗೆ ಸಂಬಂಧ ಪಟ್ಟಂತೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಆದರೆ ಈ ಪೈಕಿ ಮಕ್ಕಳ ನೋಂದಣಿ ಕುರಿತ ಒಂದು ಪ್ರಶ್ನೆ ಹೊರತು ಪಡಿಸಿ ಉಳಿದೆಲ್ಲ ಪ್ರಶ್ನೆಗಳಿಗೂ 'ಪರೀಕ್ಷಾ ಗೌಪ್ಯತೆ' ಯಿಂದಾಗಿ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.
2023-24 ಸಾಲಿನಲ್ಲಿ 5, 8, 9 ಮತ್ತು 11ನೇ ತರಗತಿಯ ಮೌಲ್ಯಾಂಕನ ಪರೀಕ್ಷೆಗೆ (ಬೋರ್ಡ್ ಪರೀಕ್ಷೆ) ನೋಂದಾಯಿಸಿಕೊಂಡಿದ್ದಾರೆ ಎಂಬ ಪ್ರಶ್ನೆಯನ್ನು ಕೆಎಸ್ಕ್ಯುಎಎಸಿ ಬಳಿ ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಕೆಎಸ್ಕ್ಯುಎಎಸಿ 5ನೇ ತರಗತಿಗೆ 9,26,358ಮಕ್ಕಳು, 8ನೇ ತರಗತಿಗೆ 9,25,894 ಮಕ್ಕಳು, 9ನೇ ತರಗತಿಗೆ 9,35,346 ಮಕ್ಕಳು ನೋಂದಾಯಿಸಿಕೊಂಡಿದ್ದರು. 12ನೇ ತರಗತಿಗೆ ಮೌಲ್ಯಾಂಕನ ನಡೆಸಿರುವುದಿಲ್ಲ ಎಂಬ ಮಾಹಿತಿ ನೀಡಿದೆ.