ಮೈಸೂರು, ಮೇ 16 (DaijiworldNews/ AK): ತಿಮಿಂಗಿಲ ಗೃಹಸಚಿವ ಪರಮೇಶ್ವರ್ ಅವರ ಪಕ್ಕದಲ್ಲೇ ಕುಳಿತಿದೆ. ತಿಮಿಂಗಿಲ ಯಾರು ಅನ್ನೋದು ಪರಮೇಶ್ವರ್ ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿದರು.
ಈ ಕುರಿತು ಮಾತನಾಡಿದ ಅವರು, ಎಸ್ಐಟಿಯನ್ನು ಕಾಣದ ಕೈ ನಿಯಂತ್ರಿಸುತ್ತಿದೆ. ಆ ತಿಮಿಂಗಿಲವನ್ನು ಹಿಡಿಯೋದು ಬಿಟ್ಟು ನನ್ನನ್ನು ಕೇಳಿದರೇ ಹೇಗೆ? ಮಂಡ್ಯ ಶಾಸಕ ಒಂದು ವಾರದಲ್ಲಿ ತಿಮಿಂಗಿಲ ಸಿಗುತ್ತೆ ಎಂದರು, ಏನಾಯಿತು ಎಂದು ಪ್ರಶ್ನಿಸಿದರು.ತಿಮಿಂಗಿಲವನ್ನು ಕುಮಾರಸ್ವಾಮಿ ನುಂಗಿಕೊಳ್ಳಲಿ ಎಂಬ ಡಿ.ಕೆ ಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಮಯ ಬರಲಿ ನುಂಗಿದರೇ ಆಯಿತು. ಎಸ್ಐಟಿ ಅಧಿಕಾರಿಗಳು ಗೃಹ ಸಚಿವರಿಗೆ ಮಾಹಿತಿ ಕೊಡುತ್ತಿಲ್ಲ. ಬೇರೆಯವರಿಗೆ ಮಾಹಿತಿ ಕೊಡುತ್ತಿದ್ದಾರೆ. ಎಸ್ಐಟಿ ತನಿಖೆ ಸರಿಯಾಗಿ ಆಗುತ್ತಿಲ್ಲ. ನಿಮ್ಮ ತಂದೆ-ತಾಯಿ, ಸಹೋದರ, ಸಹೋದರಿಯ ಮುಖ ನೋಡಿಕೊಂಡು ತನಿಖೆ ಮಾಡಿ. ನೊಂದ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಿ ಎಂದು ಎಸ್ಐಟಿ ಅಧಿಕಾರಿಗಳಿಗೆ ಮನವಿ ಮಾಡಿದರು.
ಪ್ರಜ್ವಲ್ ರೇವಣ್ಣ ಸಂಸದರಾಗಿದ್ದಲೇ ನನ್ನ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಈವಾಗ ಸಿಗುತ್ತಾರಾ? ಪ್ರಜ್ವಲ್ ರೇವಣ್ಣ ಮೊದಲಿನಿಂದಲೂ ನನ್ನ ಸಂಪರ್ಕದಲ್ಲಿ ಇಲ್ಲ. ಈ ಪ್ರಕರಣ ಆಗುವ ಹಿಂದೆಯೂ ನನ್ನ ಜೊತೆ ಸಂಪರ್ಕದಲ್ಲಿ ಇರಲಿಲ್ಲ. ಇನ್ನೂ ವಿದೇಶಕ್ಕೆ ಹೋದ ಮೇಲೆ ಹೇಗೆ ನನ್ನ ಸಂಪರ್ಕದಲ್ಲಿ ಇರುತ್ತಾರೆ. ಪ್ರಜ್ವಲ್ ರೇವಣ್ಣ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದರು.
ಈ ಪ್ರಕರಣದಲ್ಲಿ ಎರಡು ಭಾಗ ಇದೆ. ಒಂದು ವಿಡಿಯೋ ಮಾಡಿಕೊಂಡವನ ಅಪರಾಧ. ಮತ್ತೊಂದು ಆ ವಿಡಿಯೋವನ್ನ ವೈರಲ್ ಮಾಡಿ ಕುಟುಂಬವನ್ನ ಬೀದಿಗೆ ತಂದವರದ್ದು. ಬೀದಿಗೆ ತಂದವರದ್ದು ಘೋರ ಅಪರಾಧ. ಆದರೆ ಎಸ್ಐಟಿ ವೈರಲ್ ಮಾಡಿದವರನ್ನ ಬಂಧಿಸುವಲ್ಲಿ ವಿಫಲವಾಗಿದೆ. ಆರೋಪಿ ಖಾಸಗಿ ವಾಹಿನಿಗೆ ಸಂದರ್ಶನ ನೀಡುತ್ತಾನೆ. ಎಸ್ಐಟಿಗೆ ಸಿಗುತ್ತಿಲ್ಲ ಅಂದರೇ ಏನು ಅರ್ಥ? ಎಸ್ಐಟಿ ಸೂಕ್ತವಾದ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿದರು.
ಸಿಎಂ ನನ್ನನ್ನು ಹಿಟ್ ಅಂಡ್ ರನ್ ಅನ್ನುತ್ತಾರೆ. ಈ ಹಿಂದೆ ದಾಖಲೆಗಳ ಸಮೇತ ನಾನು ಮಾಡಿದ ಆರೋಪಗಳಿಗೆ ಎಷ್ಟು ಕ್ರಮ ಕೈಗೊಂಡಿದ್ದಾರೆ. ಕ್ರಮ ತೆಗೆದುಕೊಳ್ಳಲು ಈ ಸರ್ಕಾರದಿಂದ ಸಾಧ್ಯವಿಲ್ಲ. ಅದಕ್ಕಾಗಿ ನಾನು ಪೆನ್ಡ್ರೈವ್ ಕೊಡುತ್ತಿಲ್ಲ ಎಂದು ಕಿಡಿಕಾರಿದರು.