ಬೆಂಗಳೂರು, ಮೇ. 17(DaijiworldNews/AA): ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟ ಆಡಿದೆ. ಕ್ಯಾಮರಾ ಮುಂದೆ ಮಕ್ಕಳು ಪರೀಕ್ಷೆ ಬರೆಯುವ ಹಾಗೆ ಮಾಡಿದರು. ಶಿಕ್ಷಣದ ಇತಿಹಾಸದಲ್ಲೇ ಇದೊಂದು ಕಪ್ಪುಚುಕ್ಕೆ ಎಂದು ಶಾಸಕ ಸುರೇಶ್ ಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪೂರ್ಣಾವಧಿ ಶಿಕ್ಷಣ ಮಂತ್ರಿ ಇಲ್ಲ. ಪಾಪ ತಮ್ಮ ಕುಟುಂಬದ ಯಾರನ್ನೋ ಗೆಲ್ಲಿಸಲು ಓಡಾಡುತ್ತಿದ್ದಾರೆ. 5-9ನೇ ತರಗತಿವರೆಗಿನ ಮಕ್ಕಳ ಭವಿಷ್ಯ ನ್ಯಾಯಾಲಯದ ಮೆಟ್ಟಿಲೇರಿದೆ. ಮಕ್ಕಳಿಗೆ ಮತದಾನದ ಹಕ್ಕಿಲ್ಲ ಅಂತಾ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಪ್ರತಿ ವರ್ಷವೂ ಮಾಡುತ್ತಿದ್ದಾರೆ. ಇದರಿಂದ ಶಿಕ್ಷಣ ವ್ಯವಸ್ಥೆ ಮೇಲೆ ದೊಡ್ಡ ಏಟು ಬೀಳುತ್ತಿದೆ. ಇದು ಕಾಂಗ್ರೆಸ್ ಸರ್ಕಾರ ಎಸಗಿರುವ ಘನಂದಾರಿ ಅಪಚಾರ. ವಿದ್ಯಾರ್ಥಿಗಳ ಬಗ್ಗೆ ಗ್ಯಾರಂಟಿ ಸರ್ಕಾರಕ್ಕೆ ಕಾಳಜಿಯೇ ಇಲ್ಲ. ಒಂದು ವರ್ಷದ ಪರೀಕ್ಷೆಯಲ್ಲಿ ರಾಜ್ಯ ಸರ್ಕಾರ ಫೇಲ್ ಆಗಿದೆ. ಸಚಿವರಿಗೆ ತಮ್ಮ ಖಾತೆಗಿಂತ ತಮ್ಮ ಕ್ಯಾತೆಯೇ ಹೆಚ್ಚಾಗಿದೆ. ದುರದೃಷ್ಟವಶಾತ್ ಶಿಕ್ಷಣ ಸಚಿವರಲ್ಲಿ ಪೂರ್ಣಾವಧಿ ಮನಸ್ಥಿತಿ ಇಲ್ಲ. ತಮ್ಮ ಕೊರತೆಯನ್ನೇ ತಮ್ಮ ಹೆಗ್ಗಳಿಕೆ ಅಂತಾ ತಿಳಿದುಕೊಂಡಿದ್ದಾರೆ ಎಂದರು.