ದೆಹಲಿ, ಮೇ. 18(DaijiworldNews/AA): ಎಎಪಿ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಸಿಎಂ ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ ವಿಭವ್ ಕುಮಾರ್ ಹಲ್ಲೆ ನಡೆಸಿರುವ ಆರೋಪದ ಮೇರೆಗೆ ಅವರನ್ನು ದೆಹಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ವಿಭವ್ ಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿರುವ ಸ್ವಾತಿ ಮಲಿವಾಲ್ ಅವರು, ಮೇ 13 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ನಾನು ಕೇಜ್ರಿವಾಲ್ ಅವರ ಮನೆಯ ಡ್ರಾಯಿಂಗ್ ರೂಮಿನಲ್ಲಿ ಕುಳಿತಿದ್ದೆ. ಆಗ ವಿಭವ್ ಕುಮಾರ್ ಒಳಗೆ ಬಂದು ಕಾರಣವಿಲ್ಲದೇ ನನ್ನ ವಿರುದ್ಧ ಕಿರುಚಾಡಲು ಹಾಗೂ ನಿಂದಿಸಲು ಪ್ರಾರಂಭಿಸಿದ್ದಾನೆ. ನೀವು ನಮ್ಮ ಮಾತನ್ನು ಯಾಕೆ ಕೇಳುವುದಿಲ್ಲ? ಕೆಟ್ಟ ಮಹಿಳೆ, ನಾವು ನಿಮಗೆ ಪಾಠ ಕಲಿಸುತ್ತೇವೆ ಎಂದೆಲ್ಲಾ ಮನಬಂದಂತೆ ಬೈದಿದ್ದಾನೆ. ಬಳಿಕ ವಿಭವ್ ಕುಮಾರ್ ಕನಿಷ್ಠ ಏಳರಿಂದ ಎಂಟು ಬಾರಿ ನನ್ನ ಕೆನ್ನೆಗೆ ಹೊಡೆದಿದ್ದಾನೆ. ಜೊತೆಗೆ ನನ್ನ ಎದೆ, ಹೊಟ್ಟೆ, ಸೊಂಟಕ್ಕೆ ಒದ್ದಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸ್ವಾತಿ ಮಲಿವಾಲ್ ಅವರ ದೂರಿನ ಮೇರೆಗೆ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇದೀಗ ವಿಭವ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.