ಶ್ರೀನಗರ, ಮೇ.19(DaijiworldNews/AK):ಜಮ್ಮು ಮತ್ತು ಕಾಶ್ಮೀರದಲ್ಲಿ ಲೋಕಸಭೆ ಚುನಾವಣೆಯ 5ನೇ ಹಂತದ ಮತದಾನಕ್ಕೆ ಕ್ಷಣನೆ ಬಾಕಿ ಇರುವಾಗಲೇ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಜಮ್ಮು ಮತ್ತು ಕಾಶ್ಮೀ ರದ ಶೋಪಿಯಾನ್ ಮತ್ತು ಅನಂತನಾಗ್ ಜಿಲ್ಲೆಗಳಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ಭಯೋತ್ಪಾದಕ ದಾಳಿಯಲ್ಲಿ ಜೈಪುರದ ಪ್ರವಾಸಿ ದಂಪತಿಗಳು ಗಾಯಗೊಂಡಿದ್ದು, ಬಿಜೆಪಿಯ ಮಾಜಿ ಸರಪಂಚ್ ಒಬ್ಬರು ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ, ಶೋಪಿಯಾನ್ನ ಹಿರ್ಪೋ ರಾ ಪ್ರದೇಶದಲ್ಲಿ ರಾತ್ರಿ 10.30 ರ ಸುಮಾರಿಗೆ ಐಜಾಜ್ ಶೇಖ್ ಎಂದು ಗುರುತಿಸಲಾದ ಬಿಜೆಪಿಯ ಸರಪಂಚ್ ನ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದರು, ನಂತರ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ನಡೆದ ಮತ್ತೊಂದು ಘಟನೆಯಲ್ಲಿ, ಯು ಟಿಯ ಅನಂತನಾಗ್ ಜಿಲ್ಲೆಯ ಪ್ರವಾಸಿ ಶಿಬಿರದಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರಿಂದ ಜೈಪುರದ ದಂಪತಿಗಳು ಗಾಯಗೊಂಡಿದ್ದಾರೆ. ಗಾಯಾಳು ಫರ್ಹಾ ಮತ್ತು ಆಕೆಯ ಪತಿ ತಬ್ರೇಜ್ ಎಂದು ಗುರುತಿಸಲಾಗಿದೆ.
ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಎರಡೂ ಕಡೆ ದಾಳಿ ಮಾಡಿದವರು ಯಾವ ಸಂಘಟನೆಗೆ ಸೇರಿದವರು ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.