ಬೆಂಗಳೂರು, ಮೇ. 19(DaijiworldNews/AA): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ ಒಂದು ವರ್ಷ ಪೂರ್ಣಗೊಳ್ಳುತ್ತದೆ. ಈ ಹಿನ್ನೆಲೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.
ಕಾಂಗ್ರೆಸ್ ಸರ್ಕಾರದ ಒಂದು ವರ್ಷದಲ್ಲಿನ ಲೋಪ-ದೋಷಗಳು, ವೈಫಲ್ಯಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತೆ ಪ್ರತಿಭಟನೆ ನಡೆಸಲು ರಾಜ್ಯ ಬಿಜೆಪಿ, ಎಲ್ಲಾ ಬಿಜೆಪಿ ಘಟಕಗಳಿಗೆ ಸೂಚಿಸಿದೆ. ಬಿಜೆಪಿಯೊಂದಿಗೆ ಪ್ರತಿಭಟನೆಗೆ ಕೈಜೋಡಿಸಲು ಜೆಡಿಎಸ್ ಕೂಡ ಮುಂದಾಗಿದೆ. ಈ ಎರಡೂ ವಿಪಕ್ಷಗಳು ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದ ಹಿನ್ನೆಲೆ ಸಂಭ್ರಮಾಚರಣೆಗೆ ಲೋಕಸಭಾ ಚುನಾವಣೆ ನೀತಿ ಸಂಹಿತಿ ಅಡ್ಡಿಯಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರು ನಾಳೆ ಸುದ್ದಿಗೋಷ್ಠಿ ನಡೆಸಿ ಒಂದು ವರ್ಷದ ಅಧಿಕಾರಾವಧಿಯಲ್ಲಿ ಮಾಡಿದ ಕೆಲಸಗಳನ್ನು ಜನತೆಗೆ ತಿಳಿಸಲಿದ್ದಾರೆ.
ಇನ್ನು ವಿಪಕ್ಷದ ಹಿರಿಯ ನಾಯಕರು ಸಹ ಸುದ್ದಿಗೋಷ್ಠಿ ನಡೆಸಿ ಸಮಾಜ ಕಲ್ಯಾಣ, ಆಹಾರ, ಕೃಷಿ ಮತ್ತು ಗೃಹ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ವೈಫಲ್ಯಗಳ ಕುರಿತು ಜನರ ಮುಂದಿಡಲು ತೀರ್ಮಾನಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ರಾಜ್ಯಪಾಲರಿಗೆ ದೂರು ನೀಡಲು ನಿರ್ಧಾರ ಮಾಡಿವೆ.