ಚಂಡೀಗಢ, ಮೇ. 19(DaijiworldNews/AA): ಆಮ್ ಆದ್ಮಿ ಪಕ್ಷ ಮಾಡುವುದು ಕೊಳಕು ಕೆಲಸ, ಅದಕ್ಕೆ ತಕ್ಕ ಪಾಠ ಕಲಿಸಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪರಿವಾರವಾದಿ ಪಕ್ಷವಾಗಿ ಬದಲಾಗಿದೆ. ಕಾಂಗ್ರೆಸ್ ಜತೆಗೆ ಘಮಂಡಿಯಾ ಘಟಬಂದನ್ ಅಂದರೆ ಇಂಡಿಯಾ ಒಕ್ಕೂಟ ಕೂಡ ಭ್ರಷ್ಟಾಚಾರದ ಒಕ್ಕೂಟವಾಗಿದೆ. ಒಕ್ಕೂಟದಲ್ಲಿ ಕೆಲವರು ಜೈಲಿನೊಳಗಿದ್ದರೆ, ಇನ್ನೂ ಕೆಲವರು ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ.
ಕೇಜ್ರಿವಾಲ್ ಅವರು ಕೆಲವು ವರ್ಷಗಳ ಹಿಂದೆ ಯಾವುದೇ ಪಕ್ಷವನ್ನು ಸ್ಥಾಪನೆ ಮಾಡುವುದಿಲ್ಲ. ಚುನಾವಣೆಯಲ್ಲಿಯೂ ಸ್ಪರ್ಧಿಸುವುದಿಲ್ಲ ಎಂದಿದ್ದರು. ಆದರೆ ನಂತರ ಪಕ್ಷವನ್ನೂ ಕಟ್ಟಿ, ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅದೂ ಅಲ್ಲದೆ ಕಾಂಗ್ರೆಸ್ ನೊಂದಿಗೆ ಎಂದಿಗೂ ಕೈಜೋಡಿಸುವುದಿಲ್ಲ ಎಂದಿದ್ದರು. ಅದು ಆಗಿದೆ. ಯಾವುದೇ ಭ್ರಷ್ಟಾಚಾರ ಎಸಗುವುದಿಲ್ಲ ಎಂದಿದ್ದರು. ಈಗ ಭ್ರಷ್ಟಾಚಾರ ಪ್ರಕರಣದಲ್ಲಿ ಎಎಪಿಯ ಮೂವರು ಜೈಲಿನಲ್ಲಿದ್ದಾರೆ ಎಂದು ಹೇಳಿದ್ದಾರೆ.
ಎಎಪಿ ಒಳ್ಳೆಯ ಮಾತುಗಳನ್ನಾಡಬಹುದು ಆದರೆ ಮಾಡುವುದು ಕೊಳಕು ಕೆಲಸ. ಈಗ ಹೇಳಿ ಇಂತಹ ಜನರಿಗೆ ಪಾಠ ಕಲಿಸುತ್ತೀರಾ? ಅವರನ್ನು ಸೋಲಿಸುವ ಮೂಲಕ ಮನೆಯಲ್ಲಿ ಕುಳಿತುಕೊಳ್ಳುವಂತೆ ಮಾಡುತ್ತೀರಾ ಅಥವಾ ಮತ ಹಾಕುವ ಮೂಲಕ ಮುಂದೆ ಬರುವಂತೆ ಮಾಡುತ್ತೀರಾ? ಎಂದು ಜೆ.ಪಿ ನಡ್ಡಾ ಪ್ರಶ್ನೆ ಮಾಡಿದ್ದಾರೆ.