ಹುಬ್ಬಳ್ಳಿ, ಮೇ. 19(DaijiworldNews/AA): ಹತ್ಯೆಯಾದ ಅಂಜಲಿ ಅಂಬಿಗೇರ ಕುಟುಂಬಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ವೈಯಕ್ತಿಕವಾಗಿ 50 ಸಾವಿರ ರೂ. ಚೆಕ್ ಹಸ್ತಾಂತರಿಸಿ ಸಾಂತ್ವನ ಹೇಳಿದ್ದಾರೆ.
ಅಂಜಲಿ ಮನೆಗೆ ಭೇಟಿ ನೀಡಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಬಿಹಾರದಿಂದ ನೇರವಾಗಿ ಅಂಜಲಿ ಮನೆಗೆ ಭೇಟಿ ನೀಡಿದ್ದೇನೆ. ಅಂಜಲಿಯ ಅಜ್ಜಿ ಸಹೋದರಿಯರು ಹೇಳಿದ ಮಾತು ಕೇಳಿದ್ರೆ ಭಯ ಹುಟ್ಟುತ್ತೆ. ಈ ಹಿಂದೆಯೂ ಆರೋಪಿ ಕುರಿತು ದೂರು ಬಂದಿದ್ದರೂ ನಿರ್ಲಕ್ಷ್ಯ ಮಾಡಿದ್ದಾರೆ. ಆ ವೇಳೆ ಯಾವ ಅಧಿಕಾರಿಗಳಿದ್ದರು ಅವರ ಬಗ್ಗೆಯೂ ತನಿಖೆ ನಡೆಸಬೇಕು ಎಂದಿದ್ದಾರೆ.
ನೇಹಾ ಹತ್ಯೆಯಾದಾಗ ಬಹು ದೊಡ್ಡ ಸಂಚಲನ ಸೃಷ್ಟಿಯಾಗಿತ್ತು. ಆಗ ಸಿಎಂ ಹಾಗೂ ಗೃಹ ಸಚಿವರ ಹೇಳಿಕೆ ಕೃತ್ಯ ನಡೆಸುವವರಿಗೆ ಪ್ರೋತ್ಸಾಹ ನೀಡಿದಂತಾಯಿತು. ಸಿಎಂ ಅವರು ಬೇಜವಬ್ದಾರಿಯುತ ಹೇಳಿಕೆ ನೀಡಿದ್ದರಿಂದ ಈ ರೀತಿಯ ಘಟನೆಯಾಗಿದೆ. ಸರ್ಕಾರಕ್ಕೆ ಗಂಭೀರತೆ ಇಲ್ಲ. ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಕೊಲೆ, 692 ರೈತರ ಆತ್ಮಹತ್ಯೆಗಳಾಗಿವೆ. ಇದನ್ನ ಪ್ರಶ್ನೆ ಮಾಡಿದರೆ ಈ ಹಿಂದೆ ಎಷ್ಟು ಪ್ರಕರಣಗಳಾಗಿವೆ ಎಂದು ಹುಡುಕುತ್ತಾರೆ ಎಂದು ಹೇಳಿದರು.
ಈ ಮೊದಲೇ ಅಂಜಲಿ ಕುಟುಂಬಸ್ಥರು ಜೀವ ಬೆದರಿಕೆ ಇದೆ ಎಂದು ಠಾಣೆಗೆ ದೂರು ನೀಡಲು ಹೋದಾಗ ರಾಜಿ ಸಂಧಾನವನ್ನು ಏಕೆ ಮಾಡಬೇಕಿತ್ತು. ನೇಹಾ ಹಾಗೂ ಅಂಜಲಿ ಕೊಲೆ ಪ್ರಕರಣವನ್ನು ತ್ವರಿತ ನ್ಯಾಯಾಲಯ ಮೂಲಕ ವಿಚಾರಣೆ ಮಾಡಬೇಕು. ಡ್ರಗ್ಸ್ ಮಾಫಿಯಾ ನಡೆಯುವಲ್ಲಿ ಪೊಲೀಸ್ ಚೌಕಿಗಳನ್ನು ನಿರ್ಮಾಣ ಮಾಡಬೇಕು. ಡ್ರಗ್ಸ್ ಮಾಫಿಯಾ ಬಗ್ಗೆ ಮಾಹಿತಿ ತಿಳಿಸಿದವರ ಹೆಸರನ್ನು ಗೌಪ್ಯವಾಗಿ ಇಡಬೇಕು. ಡ್ರಗ್ಸ್ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.