ಹುಬ್ಬಳ್ಳಿ, ಮೇ 20(DaijiworldNews/Ak):ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಇಂದು ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿರುವ ಅಂಜಲಿ ಅಂಬಿಗೇರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಇಂದು ಸಂಜೆ ಅಥವಾ ನಾಳೆ ಸಿಐಡಿಗೆ ಹಸ್ತಾಂತರ ಮಾಡುತ್ತೇವೆ ಎಂದರು.
ಹುಬ್ಬಳ್ಳಿಯಲ್ಲಿ ಎರಡು ಕೊಲೆಗಳು ನಡೆದಿರುವುದು ದುರದೃಷ್ಟಕರ. ಅಂಜಲಿ ಕೊಲೆ ಆರೋಪಿ ಗಿರೀಶ್ ಪೊಲೀಸರ ವಶದಲ್ಲಿದ್ದು, ತನಿಖೆ ನಡೆಯುತ್ತಿದೆ. ಆರೋಪಿಗೆ ಶಿಕ್ಷೆ ಆಗಬೇಕು. ಹೀಗಾಗಿ ಪೊಲೀಸ್ ಇಲಾಖೆ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ಈ ಪ್ರಕರಣವನ್ನು ಇಂದು ಸಂಜೆ ಅಥವಾ ನಾಳೆ ಸಿಐಡಿಗೆ ಹಸ್ತಾಂತರ ಮಾಡುತ್ತೇವೆ ಎಂದರು.
ನೇಹಾದಂತೆ ಅಂಜಲಿ ಕೊಲೆ ಕೂಡ ಗಂಭೀರ ಪ್ರಕರಣ. ಕೊಲೆಯಾದ ಅಂಜಲಿ ಅಂಬಿಗೇರ ಕುಟುಂಬ ಕಡುಬಡತನದಲ್ಲಿದೆ. ಬೆಂಗಳೂರಲ್ಲಿ ಇದ್ದುಕೊಂಡೇ 2 ಕೊಲೆ ಕೇಸ್ ಮಾಹಿತಿ ಪಡೆಯುತ್ತಿದ್ದೆ. ಮಾನವೀಯತೆ ದೃಷ್ಟಿಯಿಂದ 2 ಕುಟುಂಬಗಳನ್ನು ಭೇಟಿ ಮಾಡಿದ್ದೇನೆ. ಪೊಲೀಸರಿಗೆ ಕೆಲ ಸೂಚನೆ ಕೊಡಬೇಕು, ಹೀಗಾಗಿ ಹುಬ್ಬಳ್ಳಿಗೆ ಬಂದಿದ್ದೇನೆ ಎಂದು ತಿಳಿಸಿದರು.
ಇನ್ನು ಇದೇ ವೇಳೆ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಸಿಬಿಐಗೆ ಕೊಡಲ್ಲ. ರಾಜ್ಯದ ಪೊಲೀಸರು ಸಮರ್ಥರಿದ್ದಾರೆ, ಹೀಗಾಗಿ ಸಿಬಿಐಗೆ ಕೊಡಲ್ಲ. ಕೆಲವು ಬಾರಿ ಹೊರಗಿನವರಿಂದ ತನಿಖೆ ಆಗಬೇಕು. ಹೀಗಾಗಿ ನೇಹಾ ಪ್ರಕರಣ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.