ಬೆಂಗಳೂರು, ಮೇ. 21(DaijiworldNews/AK):ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಇದೀಗ ಸ್ಫೋಟಕ ತಿರುವೊಂದು ಪಡೆದಿದೆ. ಪ್ರಕರಣದಲ್ಲಿ ಇಬ್ಬರು ವೈದ್ಯರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಕೊಯಮತ್ತೂರು ಖಾಸಗಿ ಆಸ್ಪತ್ರೆಯ ಮೇಲೆ ಇಂದು ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ದಾಳಿ ನಡೆಸಿದೆ. ಬ್ಲಾಸ್ಟ್ ಪ್ರಕರಣದಲ್ಲಿ ತಮಿಳುನಾಡಿನ ನಾರಾಯಣಗುರು ಖಾಸಗಿ ಆಸ್ಪತ್ರೆಯಲ್ಲಿ ತರಬೇತಿ ನೀಡುತ್ತಿರುವ ವೈದ್ಯರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇವರು ಆರೋಪಿಗಳಿಗೆ ಹಣ ಸಹಾಯ ಮಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ 5ಕ್ಕೂ ಹೆಚ್ಚು ಕಡೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಮತೀನ್ ಮತ್ತು ಶಾಜೀಬ್ ಗೆ ಹಣ ಸಹಾಯ ಮಾಡಿದ ಆರೋಪದ ಮೇಲೆ ದಾಳಿ ನಡೆಸಿ ಅಧಿಕಾರಿಗಳು ದಾಖಲೆ ಜಪ್ತಿ ಮಾಡಿದ್ದಾರೆ.
ಮಾರ್ಚ್ 1 ರಂದು ಮಧ್ಯಾಹ್ನ 12:55 ರ ಸುಮಾರಿಗೆ ವೈಟ್ಫೀಲ್ಡ್ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಲಾಗಿತ್ತು. ಘಟನೆ ನಡೆದ ಕೆಲ ದಿನಗಳ ಬಳಿಕ ಕೃತ್ಯ ಎಸಗಿದ ಮೊಹಮ್ಮದ್ ಮತೀನ್ ಮತ್ತು ಮುಸಾವಿರ್ ಹುಸೇನ್ ಅನ್ನು ಎನ್ಐಎ ಅಧಿಕಾರಿಗಳು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಯಿತು.