ಬೆಂಗಳೂರು, ಮೇ 21 (DaijiworldNews/AA): ಡಿಸಿಎಂ ಡಿ.ಕೆ ಶಿವಕುಮಾರ್ ರಕ್ಷಣೆಗೆ ಸಿಎಂ ಸಿದ್ದರಾಮಯ್ಯ ಮತ್ತು ಸರ್ಕಾರ ನಿಂತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೋ ರಿಲೀಸ್ ಆದಾಗಿನಿಂದ ಡಿಕೆ ಶಿವಕುಮಾರ್ ಮಾತನಾಡುತ್ತಿಲ್ಲ. ಹೀಗಾಗಿ ನಾನು ತನಿಖೆ ಯಾವ ರೀತಿ ನಡೆಯುತ್ತಿದೆ ಎಂದು ಕೇಳಿದ್ದು. ಈ ಕುರಿತು ನಾವು ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದರು.
ನಾನು ಈ ಮೊದಲೇ ಹೇಳಿದ್ದೇನೆ ಯಾರೇ ತಪ್ಪು ಮಾಡಿದ್ದರೂ ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು. ತಪ್ಪಿತಸ್ಥರನ್ನು ನಾವು ರಕ್ಷಣೆ ಮಾಡುವುದಿಲ್ಲ. ಈ ವಿಚಾರದಲ್ಲಿ ಸರ್ಕಾರ ನಡೆದುಕೊಳ್ಳುವುದನ್ನ ನೋಡಿದರೆ ನಮ್ಮ ಕುಟುಂಬವನ್ನು ನಿರ್ಣಾಮ ಮಾಡಬೇಕು ಎಂಬಂತಿದೆ ಎಂದು ಆರೋಪಿಸಿದರು.
ಈ ಪ್ರಕರಣವನ್ನು ಅವರೇ ಸೃಷ್ಟಿಸಿ ಹೊರಗೆ ತಂದು ಅವರೇ ಅಮಿತ್ ಶಾ ಅವರನ್ನು ಪ್ರಶ್ನಿಸುತ್ತಿದ್ದಾರೆ. ಜೆಡಿಎಸ್ ಹೊಂದಾಣಿಕೆ ಯಾವಾಗ ಮುರಿದುಕೊಳ್ತೀರಾ? ಜೆಡಿಎಸ್ ಅನ್ನು ಯಾವಾಗ ದೂರ ಇಡುತ್ತೀರಾ ಎಂದು ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡುತ್ತಾರೆ. ಜೆಡಿಎಸ್- ಬಿಜೆಪಿ ಸಂಬಂಧದಿಂದಲೇ ಈ ಪ್ರಕರಣವನ್ನ ಇಷ್ಟು ದೊಡ್ಡ ಮಟ್ಟದಲ್ಲಿ ಸೃಷ್ಟಿ ಮಾಡಿರೋದು. ಕಾಂಗ್ರೆಸ್ ನವರು 20 ಸೀಟು ಗೆಲ್ಲುವ ಭ್ರಮೆಯಲ್ಲಿ ಇದ್ದರು. ಆದರೆ ಈಗ ಆ ಕನಸು ನುಚ್ಚು ನೂರಾಗಿರುವುದರಿಂದ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದರು.