ನವದೆಹಲಿ, ಮೇ 21 (DaijiworldNews/AA): ತಮಿಳುನಾಡಿಗೆ 2.5 ಟಿಎಂಸಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕರ್ನಾಟಕಕ್ಕೆ ನಿರ್ದೇಶಿಸಿದೆ.
ಇಂದು ನಡೆದ ಸಭೆಯಲ್ಲಿ ಪ್ರಾಧಿಕಾರವು, ಮೇ ತಿಂಗಳ ಭಾಗವಾಗಿ 2.5 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸೂಚನೆ ನೀಡಿದೆ. ಈ ಹಿಂದೆ ಕಾವೇರಿ ನೀರು ನಿಯಂತ್ರಣ ಸಮಿತಿಯೂ 2.5 ಟಿಎಂಸಿ ನೀರು ಹರಿಬಿಡುವಂತೆ ಕರ್ನಾಟಕಕ್ಕೆ ಶಿಫಾರಸ್ಸು ಮಾಡಿತ್ತು.
ಇದೀಗ ರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆಯಾಗುತ್ತಿರುವ ಹಿನ್ನೆಲೆ ಕೊಡಗಿನ ತ್ರಿವೇಣಿ ಸಂಗಮದಲ್ಲಿ ಮಳೆ ಹೆಚ್ಚಾಗಿದೆ. ಹೀಗಾಗಿ ಕಾವೇರಿಯಲ್ಲಿ ಕೊಂಚ ನೀರಿನ ಪ್ರಮಾಣ ಹೆಚ್ಚಾಗಿದೆ. ಜೊತೆಗೆ ಕೆಆರ್ಎಸ್ ಒಳ ಹರಿವು ಕೂಡ ಹೆಚ್ಚಾಗಿದೆ. ಕಳೆದ ಒಂದು ವಾರದಲ್ಲಿ 1 ಟಿಎಂಸಿ ನೀರು ಕನ್ನಂಬಾಡಿ ಕಟ್ಟೆಗೆ ಹರಿದು ಬಂದಿದೆ.
ಬಿರು ಬೇಸಿಗೆಯಿಂದ, ನೀರಿಲ್ಲದೇ ಕಂಗಾಲಾಗಿದ್ದ ರಾಜ್ಯದ ಜನರಿಗೆ ಮುಂಗಾರು ಪೂರ್ವ ಮಳೆಯು ಕೊಂಚ ನಿರಾಳ ತಂದಿದೆ. ಇದೀಗ ಈ ಹೊತ್ತಿನಲ್ಲೇ ತಮಿಳುನಾಡಿಗೆ ನೀರು ಹರಿಸುವಂತೆ ಸಿಡಬ್ಲ್ಯೂಎಂಎ ನಿರ್ದೇಶಿಸಿದೆ.